Advertisement

ಸರ್‌ ಕೊಡಿಸಿದ ಪಾರ್ಟಿಯಲ್ಲಿ ತಿನ್ನೋಕೆ ಮಿತಿಯೇ ಇರಲಿಲ್ಲ !

10:24 PM Sep 01, 2020 | Karthik A |

ನಾವು ಆಗಷ್ಟೆ ವಿಶ್ವ ವಿದ್ಯಾಲಯಕ್ಕೆ ಪ್ರವೇಶವನ್ನ ಪಡೆದಿದ್ದೆವು. ಪಾಠ ಕೇಳುವುದಕ್ಕಿಂತ ನಮಗೆ ವಿವಿಯಲ್ಲಿನ ಹೊಸತನ್ನು ಅರಿಯುವ ಹುಮ್ಮಸ್ಸು.

Advertisement

ಅದೇ ಸಮಯಕ್ಕೆ ವಿವಿಗೆ ನ್ಯಾಕ್‌ ಕಮಿಟಿ ಬರಲು ದಿನಾಂಕ ನಿಗದಿಯಾಗಿತ್ತು. ಹಾಗಾಗಿ ವಿವಿಯಲ್ಲಿ ಕೆಲಸ ಕೂಡಾ ಬಲು ಜೋರಾಗಿತ್ತು.

ನ್ಯಾಕ್‌ ಟೀಮ್‌ನವರು ಪ್ರತಿ ಡಿಪಾರ್ಟ್‌ಮೆಂಟ್‌ಗೆ ಭೇಟಿ ಕೊಡುವುದರಿಂದ ಡಿಪಾರ್ಟ್‌ಮೆಂಟ್‌ಗಳಲ್ಲಿ ಕೂಡಾ ಕೆಲಸಗಳು ಬಲು ಜೋರಿತ್ತು. ನಮ್‌ ಡಿಪಾರ್ಟ್‌ಮೆಂಟ್‌ನಲ್ಲಿ ಬೇರೆ ಬೇರೆ ಭಾಷೆಯ, ಬೇರೆ ಬೇರೆ ದೇಶದ ಪತ್ರಿಕೆಗಳನ್ನ ಸಂಗ್ರಹಿಸಿಡಲಾಗಿತ್ತು.

ಹಾಗಾಗಿ ಡಿಪಾರ್ಟ್‌ಮೆಂಟಿನಲ್ಲಿದ್ದ ಪತ್ರಿಕೆಗಳನ್ನ ಹಿಸ್ಟ್ರಿ ಡಿಪಾರ್ಟ್‌ಮೆಂಟಿನಲ್ಲಿದ್ದ ಆರ್ಟ್‌ ಗ್ಯಾಲರಿಗೆ ಸಾಗಿಸಬೇಕಿತ್ತು. ಈ ಎಲ್ಲ ಪತ್ರಿಕೆಗಳನ್ನ ದೊಡ್ಡ ದೊಡ್ಡ ಟ್ರಂಕ್‌ಗಳಲ್ಲಿ ಇಡಲಾಗಿತ್ತು.

ಸೀನಿಯರ್ ಮತ್ತು ಜ್ಯೂನಿಯರ್ ಸೇರಿ ಇವುಗಳನ್ನ ಸಾಗಿಸಲು ಮುಂದಾದೆವು. ಇವುಗಳನ್ನ ಕೈಯಲ್ಲಿ ಎತ್ತಿಕೊಂಡು ಸಾಗಿಸುವುದು ಕಷ್ಟದ ಕೆಲಸವಾಗಿತ್ತು. ಇನ್ನೊಂದು ಆಸಕ್ತಿಯ ಸಂಗತಿ ಎಂದರೆ ಇವುಗಳನ್ನ ಆರ್ಟ್‌ ಗ್ಯಾಲರಿಗೆ ಸಾಗಿಸಲು ಜತೆಯಾದದ್ದು ವಿವಿಯ ಪುಸ್ತಕ ವಾಹನ. ಬೃಹತ್‌ ಟ್ರಂಕ್‌ಗಳನ್ನ ಎತ್ತಿಕೊಂಡು ಬಂದು ಗಾಡಿಗೆ ಹಾಕಿದೆವು. ಇನ್ನು ಒಂದಿಷ್ಟು ಸ್ನೇಹಿತರು ಅವುಗಳನ್ನು ಆರ್ಟ್‌ ಗ್ಯಾಲರಿಯಲ್ಲಿ ಇಳಿಸಿಕೊಳ್ಳಲು ವಾಹನ ಹತ್ತಿ ಕೂತರು. ಹೀಗೆ ಅದೇ ಗಾಡಿಯಲ್ಲಿ ಮೂರ್ನಾಲ್ಕು ಸಾಗಿಸಿದೆವು.

Advertisement

ಅಂತು ಸಂಜೆ ಐದು ಗಂಟೆಗೆ ಎಲ್ಲ ಕೆಲಸ ಮುಗಿದಿತ್ತು. ಈ ಕೆಲಸ ಮುಗಿಯುತಿದ್ದಂತೆ ಸೀನಿಯರ್ಸ್‌ ಸತ್ಯಪ್ರಕಾಶ್‌ ಸರ್‌ಗೆ ಕಾಲ್‌ ಮಾಡಿ, “ಸರ್‌ ಶಿಫ್ಟಿಂಗ್‌ ಮುಗೀತು’ ಎಂದರು. ಸರ್‌ ಕೂಡಾ ಖುಷಿಯಿಂದಲೆ “ಶಿಫ್ಟಿಂಗ್‌ ಮಾಡಿದವರೆಲ್ಲ ಕ್ಯಾಂಟೀನಲ್ಲಿ ಏನಾದ್ರು ತಿನ್ನಿ. ನಾನು ದುಡ್ಡು ಕೊಡ್ತಿನಿ’ ಎಂದಾಗ ದ‌ಂಡು ಕಟ್ಟಿಕಂಡು ಜಗ್ಗಣ್ಣನ ಕ್ಯಾಂಟೀನಿಗೆ ಲಗ್ಗೆ ಇಟ್ಟೆವು.

ಇದ್ದದ್ದು ನಾವು ಹತ್ತೋ ಹನ್ನೊಂದೋ ಜನ. ಮೊದ ಮೊದಲು ಕ್ಯಾಂಟೀನಿನ ಗೋಬಿ ಮಂಚೂರಿಗೆ ಮುತ್ತಿಕ್ಕೆವು. ಹಿಂದೆಯೇ ನಾನೇನು ಮಾಡಿದ್ದೆ ಅಂತಾ ಟೀ ಕೂಡಾ ಜತೆಯಾಯಿತು. ಇಷ್ಟಕ್ಕೆ ಮುಗಿಯಿತು ಅಂದುಕೊಂಡ ನಾವು ಸುಮ್ಮನೆ ಹರಟೆ ಹೊಡೆಯುತ್ತಾ ಕೂತುಬಿಟ್ಟೆವು. ನಮ್‌ ಸರ್‌ ಏನಾದ್ರೂ ತಿನ್ನಿ ಬಿಲ್‌ ನಾನ್‌ ಕೊಡ್ತಿನಿ ಅಂದಿದ್ದು ಅದು ಯಾರಿಗೆ ನೆನಪಾಯಿತೋ ಗೊತ್ತಿಲ್ಲಾ. ನಿಧಾನಕ್ಕೆ ಬಾದಾಮ್‌ ಮಿಲ್ಕ್, ದೊಡ್ಡ ದೊಡ್ಡ ಕೋನ್‌ ಐಸ್‌ಕ್ರೀಂ, ಮಸಾಲಪೂರಿ ಹೀಗೆ ಒಂದಾದ ಮೇಲೆ ಒಂದರಂತೆ ನಿಧಾನವಾಗಿ ಹೊಟ್ಟೆ ಸೇರಿದವು.

ಎಲ್ಲ ತಿಂದಾದ ಮೇಲೆ ಜಗ್ಗಣ್ಣನ ಬಿಲ್‌ ಕೌಂಟರ್‌ಗೆ ಬಂದೆವು. ಜಗ್ಗಣ್ಣ ನಾವು ತಿಂದಿದ್ದನ್ನು ಎಳೆ ಎಳೆಯಾಗಿ ಲೆಕ್ಕ ಹಾಕ ತೊಡಗಿದರು. ನೋಡ ನೋಡುತ್ತಿದ್ದಂತೆ ಲೆಕ್ಕ ಹೆಚ್ಚುತ್ತಲೇ ಇತ್ತು. ಕೊನೆಗೆ ಬಿಲ್‌ ನೋಡಿದರೆ ಎರಡು ಸಾವಿರ ರೂ. ದಾಟಿ ಹೋಗಿತ್ತು. ಜಗ್ಗಣ್ಣನಿಗೆ ನಮ್‌ ಸರ್‌ ಕೊಡ್ತಾರೆ ಅಂತಾ ಹೇಳಿ ಅಲ್ಲಿಂದ ಕಾಲ್ಕಿತ್ತೆವು.

ಮಾರನೆ ದಿನ ವಿಕ್ಕಿ ಅಣ್ಣನ ಕರೆದು ಬಿಲ್‌ ಕೇಳಿದ್ರು. ಅವನು ಜಗ್ಗಣ್ಣ ಕೊಟ್ಟಿದ್ದ ಬಿಲ್‌ನನ್ನು ಉದ್ದಕ್ಕೆ ಸರ್‌ ಟೇಬಲ್‌ ಮೇಲಿಟ್ಟ. ನಮ್‌ ಸರ್‌ ಇದನ್ನ ನೋಡಿ “ಅದೇನು ತಿಂದ್ರಿ ಇಷ್ಟೊಂದು’ ಎಂದು ಕೇಳಿದರಂತೆ. ತಿಂದವರೆಲ್ಲಾ ಎದುರಿಗೆ ಸಿಕ್ಕಾಗ ನಾವು “ಸರ್‌ ಚೆಕ್‌ ಕೊಟ್ಟಿದ್ದಾ ಕ್ಯಾಶ್‌ ಕೊಟ್ಟಿದ್ದಾ?’ ಅಂತ ಜೋರಾಗಿ ನಗುತ್ತಿದ್ದೆವು.

ಅದೇ ಕೊನೆ. ಅವತ್ತಿಂದ ಸರ್‌ ನಮಗೆ ಪಾರ್ಟಿನೇ ಕೊಡಿಸಲಿಲ್ಲ. ನಾವು ಕೂಡಾ ಅವರು ಮತ್ತೆ ಯಾವಾಗ ಪಾರ್ಟಿ ಕೊಡಿಸುತ್ತಾರೆ ಅಂತಾ ಕಾಯ್ತಾ ಇದ್ದೇವೆ. ಏನೇ ಆಗ್ಲಿ ಅವತ್ತಿನ ನಮ್ಮ ಪಾರ್ಟಿಯಲ್ಲಿ ತಿನ್ನೋಕೆ ಮಿತಿಯೇ ಇರಲಿಲ್ಲ.

 ಪವನ್‌ಕುಮಾರ್‌ ಎಂ., ಕುವೆಂಪು ವಿವಿ 

 

Advertisement

Udayavani is now on Telegram. Click here to join our channel and stay updated with the latest news.

Next