Advertisement

ಸಬಳೂರು ಸರಕಾರಿ ಶಾಲೆಯಲ್ಲಿ ಮೇಳೈಸಿದ ‘ಮಕ್ಕಳ ಸಂತೆ’

04:02 PM Nov 11, 2017 | |

ಆಲಂಕಾರು: ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ವರ್ಷದ ಮೆಟ್ರಿಕ್‌ ಮೇಳ ಮಕ್ಕಳ ಮಾರ್ಕೆಟ್‌ ಬುಧವಾರ ನಡೆಯಿತು.

Advertisement

ಗ್ರಾಮೀಣ ಪ್ರದೇಶವಾದ ಸಬಳೂರು ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಗೆಡ್ಡೆ ಗೆಣಸು, ಹೂವು, ಹಣ್ಣು ಹಂಪಲುಗಳನ್ನು, ತಿಂಡಿ ತಿನಿಸುಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂತೆ ವಾತಾವರಣವನ್ನು ನೆನಪಿಸು ವುದರೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವ್ಯವಹಾರ ಜ್ಞಾನವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಯಿತು.

ಈ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ಬೇರೆ ಶಾಲೆಗಳು ನಡೆಸುತ್ತಿವೆ. ವ್ಯಾಪಾರದ ಮೂಲಕ ಜಾಗೃತಿ ನೀಡಿದ ತಾಲೂಕಿನ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೆತ್ತವರು ಹಾಗೂ ಸಾರ್ವಜನಿಕರು ಮಕ್ಕಳು ತಂದ ತಾಜಾ ತರಕಾರಿಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಿದರು.

ಸಂತೆಯಾದ ಶಾಲಾ ಆವರಣ
ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದ ತರಕಾರಿಗಳನ್ನು ಶಾಲಾ ಆವರಣದಲ್ಲಿ ಮಾರಾಟ ಮಾಡಿ ಸಂಪಾದನೆ ಮಾಡಿ ಪುಡಿಗಾಸು ಜೇಬಿಗಿಳಿಸಿಕೊಂಡರು. ನಾಲ್ಕರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ತರಕಾರಿಗಳನ್ನು ಹರವಿಕೊಂಡು ಉತ್ಸಾಹದಿಂದ ಭಾಗವಹಿಸಿ ತಾವೇನೂ ವ್ಯಾಪಾರಿಗಳಿಗಿಂತ ಕಡಿಮೆಯಿಲ್ಲ ಎನ್ನುವಷ್ಟರಮಟ್ಟಿಗೆ ವ್ಯಾಪಾರದಲ್ಲಿ ತಲ್ಲೀನರಾದರು.

ಸೊಪ್ಪು-ತರಕಾರಿಗಳಾದ ಬಸಳೆ, ಹರಿವೆ, ತಿಮರೆ, ಬೇವು, ನುಗ್ಗೆ ಸೊಪ್ಪು, ಸೌತೆ, ಪಡುವಳ ಕಾಯಿ, ಹಣ್ಣುಗಳಾದ ಬಾಳೆ ಹಣ್ಣು, ಪಪ್ಪಾಯಿ, ಸೀಯಾಳ, ತೆಂಗಿನ ಕಾಯಿ, ಔಷಧೀಯ ಗುಣಗಳ ಗಡಿಮದ್ದು ಸೊಪ್ಪು, ಹೂವಿನ ಗಿಡಗಳಾದ ಸೇವಂತಿಗೆ, ಹಲಸಿನ ಬೀಜ, ವೀಳ್ಯದೆಲೆ, ಪಾನಿಪುರಿ, ಬೇಲ್‌ಪುರಿ, ಟೊಮೇಟೋ ಸೂಪ್‌ ಮೊದಲಾದವುಗಳು ಮಕ್ಕಳ ಮಾರ್ಕೆಟ್‌ನಲ್ಲಿ ಮೇಳೈಸಿದವು. ವಿದ್ಯಾರ್ಥಿಗಳ ಪೈಕಿ ಆರನೇ ತರಗತಿಯ ಜೀವಿತ್‌ ಬಿ.ಎಸ್‌., ಹರ್ಷಿತ್‌ ಕುಮಾರ್‌ ಬಿ.ಎಂ. ಅತೀ ಹೆಚ್ಚು ವ್ಯಾಪಾರ ನಡೆಸಿದರು.

Advertisement

ಬೆಳಗ್ಗೆ ಪ್ರಾರಂಭವಾದ ಮೆಟ್ರಿಕ್‌ ಮೇಳವನ್ನು ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಕೊಲ್ಯ ತರಕಾರಿ ಖರೀದಿಸುವ ಮೂಲಕ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ವಾರಿಜಾ, ಗ್ರಾಹಕ ಮೇಳದ ಮಾರ್ಗದರ್ಶಿ ಶಿಕ್ಷಕಿ ಮಮತಾ ಪಿ., ಶಿಕ್ಷಕರಾದ ಪದ್ಮಯ್ಯ ಗೌಡ, ಯಶೋದಾ ಬಿ., ತಾರಾದೇವಿ, ವಾರಿಜಾ ಏಣಿತಡ್ಕ, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next