ಸೆಂಚೂರಿಯನ್, ದಕ್ಷಿಣ ಆಫ್ರಿಕ : ಇಲ್ಲೀಗ ಸಾಗುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಇಂದಿನ ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ, ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ 141 ರನ್‌ಗಳ ನೆರವಿನೊಂದಿಗೆ, ಎಂಟು ವಿಕೆಟ್ ನಷ್ಟಕ್ಕೆ 287 ರನ್ ತೆಗೆದಿದೆ.
ಆತಿಥೇಯ ದಕ್ಷಿಣ ಆಫ್ರಿಕ ತಂಡದ ಮೊದಲ ಇನ್ನಿಂಗ್ಸ್ ಮೊತ್ತದಿಂದ (335 ರನ್) ಭಾರತ ಈಗ ಕೇವಲ 48 ರನ್ ಹಿಂದಿದೆ.
ದಕ್ಷಿಣ ಆಫ್ರಿಕ ಎಸೆಗಾರ ಕ್ಯಾಗಿಸೋ ರಬಾಡಾ ಅವರು 73 ರನ್ ವೆಚ್ಚಕ್ಕೆ 1 ವಿಕೆಟ್ ಮಾತ್ರವೇ ಕೀಳುವಲ್ಲಿ ಸಫಲರಾಗಿದ್ದಾರೆ.
ನಿನ್ನೆಯ ಎರಡನೇ ದಿನದಾಟದ ಅಂತ್ಯಕ್ಕೆ ವಿರಾಟ್ ಕೊಹ್ಲಿ ಅವರ 85 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಇಂದು ಅವರು ತಮ್ಮ 21ನೇ ಟೆಸ್ಟ್ ಶತಕವನ್ನು ಪೂರೈಸಿ. ಲಂಚ್ ವೇಳೆಗೆ ಕೊಹ್ಲಿ ಔಟಾಗದೇ 141 ರನ್‌ಗಳೊಂದಿಗೆ ಆಡುತ್ತಿದ್ದರು.
ದಕ್ಷಿಣ ಆಫ್ರಿಕ ಇಂದು ಬೆಳಗ್ಗಿನ ಆಟದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಅವರ ವಿಕೆಟ್ ಕೀಳುವಲ್ಲಿ ಸಫಲವಾಯಿತು. ಆದರೆ ಕೊಹ್ಲಿ ದೃಢವಾಗಿ ನಿಂತು ಅತ್ಯಂತ ಸಹನೆಯ ಮತ್ತು ಕೆಚ್ಚಿನ ಆಟವನ್ನು ಪ್ರದರ್ಶಿಸಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.