ಬೆಂಗಳೂರು: ವಿಕಲಚೇತನರ ಮಾಸಾಶನವನ್ನು ಕನಿಷ್ಠ 3000 ರೂ.ಗೆ ಹೆಚ್ಚಿಸಬೇಕು ಮತ್ತು ತೀವ್ರ ಸ್ವರೂಪದ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಮಾಸಿಕ 5000 ರೂ. ಜೀವನ ನಿರ್ವಹಣಾ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಅಂಗವಿಕಲರು ಬುಧವಾರ ಟೌನ್‌ಹಾಲ್ ಎದುರು ಪ್ರತಿಭಟಿಸಿದರು.
ಪ್ರಸ್ತುತ ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದವರಿಗೆ ಕೇಂದ್ರದಿಂದ 300 ರೂ. ಮತ್ತು ರಾಜ್ಯದಿಂದ 200 ರೂ. ಸೇರಿ 500 ರೂ. ಹಾಗೂ ತೀವ್ರ ರೀತಿಯ ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಕೇಂದ್ರದಿಂದ 300 ರೂ. ಮತ್ತು ರಾಜ್ಯದಿಂದ 900 ರೂ. ಸೇರಿ 1200 ರೂ. ಮಾಸಾಶನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕಡಿಮೆ ಹಣ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅಂಗವಿಕಲರಿಗೆ ಉದ್ಯೋಗ ತರಬೇತಿ ನೀಡುವುದು ಇಲ್ಲವೇ ಜೀವನ ನಿರ್ವಹಣಾ ಭತ್ಯೆಯನ್ನು 3000 ರೂ.ಗೆ ಹೆಚ್ಚಿಸುವುದಾಗಿ ಹೇಳಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ.
ಆದ್ದರಿಂದ ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನವನ್ನು ಕನಿಷ್ಠ 3000 ರೂ.ಗೆ ಹೆಚ್ಚಿಸಬೇಕು ಮತ್ತು ತೀವ್ರ ಸ್ವರೂಪದ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಮಾಸಿಕ 5000 ರೂ. ಜೀವನ ನಿರ್ವಹಣೆ ಭತ್ಯೆ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದರ ಜತೆಗೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016ನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ದೈಹಿಕ ಅಂಗವಿಕಲರು, ಮಾನಸಿಕ ವೈಕಲ್ಯ ಹೊಂದಿದವರ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಬೇಕು. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸೂಕ್ತ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಬೆಂಗಳುರು ಜಿಲ್ಲಾ ಮುಖಂಡ ಎಸ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ರಾಜ್ಯ ಕಾರ್ಯದರ್ಶಿ ಜಿ.ಎಸ್.ಯಶಸ್ವಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅಂಗವಿಕಲರು, ಅಂಗವಿಕಲರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.