ಮಧ್ಯಪ್ರದೇಶ:ಬಾಲಕನೊಬ್ಬನನ್ನು ರಕ್ಷಿಸಲು ಬಾವಿಯ ಸುತ್ತ ಜನರು ಗುಂಪುಗೂಡಿ ಹರಸಾಹಸ ಪಡುತ್ತಿದ್ದ ವೇಳೆಯಲ್ಲಿಯೇ ಆವರಣ ಕುಸಿದು ಬಿದ್ದ ಪರಿಣಾಮ ಬಾವಿಯೊಳಗೆ 30 ಮಂದಿ ಗ್ರಾಮಸ್ಥರು ಬಿದ್ದಿದ್ದು, ಘಟನೆಯಲ್ಲಿ ಮೂವರು ಮಂದಿ ಸಾವನ್ನಪ್ಪಿದ್ದಾರೆ. ಹತ್ತೊಂಬತ್ತು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಗುರುವಾರ (ಜುಲೈ15) ನಡೆದಿದೆ.
ಇದನ್ನೂ ಓದಿ:ಶ್ರೀನಗರ: ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಬಾವಿಯೊಳಗೆ ಬಿದ್ದ ಬಾಲಕನನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಬಾಲಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಸಂದರ್ಭದಲ್ಲಿ ಜನರ ಭಾರದಿಂದಾಗಿ ಬಾವಿಯ ಸುತ್ತಲಿನ ಪ್ಯಾರಪಿಟ್ ಗೋಡೆ ಕುಸಿದು ಬಿದ್ದಿತ್ತು. ಬಾವಿ ಸುಮಾರು 50 ಅಡಿ ಆಳವಾಗಿದ್ದು, ಸುಮಾರು 20 ಅಡಿಗಳಷ್ಟು ನೀರಿನ ಮಟ್ಟವಿತ್ತು ಎಂದು ಪಿಟಿಐ ನ್ಯೂಸ್ ವರದಿ ಮಾಡಿದೆ
ವಿದಿಶಾ ಜಿಲ್ಲಾ ಕೇಂದ್ರದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಗಂಜ್ ಬಸೋದಾದಲ್ಲಿ ಈ ಘಟನೆ ನಡೆದಿದೆ. ಬಾವಿಯೊಳಗೆ ಸುಮಾರು 30 ಮಂದಿ ಗ್ರಾಮಸ್ಥರು ಬಿದ್ದಿದ್ದು, ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಈವರೆಗೆ 19 ಮಂದಿಯನ್ನು ರಕ್ಷಿಸಲಾಗಿದೆ. ಮೂವರ ಶವ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ.