ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್‌ನ ಮಧ್ಯಾಂತರ ಸರಕಾರದಲ್ಲಿರುವ ಕನಿಷ್ಠ 14 ಸದಸ್ಯರು ವಿಶ್ವಸಂಸ್ಥೆ ಭದ್ರತಾ ಮಂಡಳಿಯ “ಭಯೋತ್ಪಾದಕರ ಪಟ್ಟಿ’ಯಲ್ಲಿರುವವರು!
ವಿಶೇಷವೆಂದರೆ, ಈ ಕಪ್ಪುಪಟ್ಟಿಯಲ್ಲಿರುವ ಉಗ್ರರ ಪೈಕಿ ಪ್ರಧಾನಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್, ಇಬ್ಬರು ಉಪಪ್ರಧಾನಿಗಳು ಕೂಡ ಸೇರಿದ್ದಾರೆ. ಆಂತರಿಕ ಸಚಿವನಾಗಿ ಆಯ್ಕೆಯಾಗಿರುವ ಜಾಗತಿಕ ಉಗ್ರ ಸಿರಾಜುದ್ದೀನ್ ಹಕ್ಕಾನಿ ತಲೆಗೆ 10 ದಶಲಕ್ಷ ಡಾಲರ್ ಬಹುಮಾನವನ್ನೂ ಅಮೆರಿಕ ಘೋಷಿಸಿತ್ತು.
ವಲಸೆ ಸಚಿವ, ರಕ್ಷಣ ಸಚಿವ, ವಿದೇಶಾಂಗ ಸಚಿವ ಕೂಡ ಭಯೋತ್ಪಾದಕರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಒಟ್ಟಾರೆ 33 ಮಂದಿಯಲ್ಲಿ 14 ಮಂದಿ ಕಪ್ಪುಪಟ್ಟಿಯಲ್ಲಿರುವವರು ಎಂದು ಬಿಬಿಸಿ ಉರ್ದು ವರದಿ ಮಾಡಿದೆ. ಇದೇ ವೇಳೆ, “ನಮ್ಮ ದೇಶದಲ್ಲಿನ್ನು ಪಿಎಚ್‌ಡಿ, ಸ್ನಾತಕೋತ್ತರ ಪದವಿಗಳಿಗೆ ಬೆಲೆಯಿಲ್ಲ. ಇಲ್ಲಿ ಶರಿಯಾಗೆ ಮಾತ್ರ ಬೆಲೆ’ ಎಂದು ಹೊಸ ಶಿಕ್ಷಣ ಸಚಿವ ಘೋಷಿಸಿದ್ದಾನೆ.
200 ಅಫ್ಘನ್ನರು ಗಡಿಪಾರು: ತಾಲಿಬಾನ್ ಆಡಳಿತಕ್ಕೆ ಹೆದರಿ ಪಾಕಿಸ್ಥಾನಕ್ಕೆ ವಲಸೆ ಬಂದಿದ್ದ ಸುಮಾರು 200 ಅಫ್ಘಾನ್ ನಾಗರಿಕರನ್ನು ಬುಧವಾರ ಪಾಕ್ ಸರಕಾರ ಅಫ್ಘಾನಿಸ್ಥಾನಕ್ಕೆ ಗಡಿಧೀಪಾರು ಮಾಡಿದೆ. ಮಕ್ಕಳು, ಮಹಿಳೆಯರು ಸೇರಿ 200 ಮಂದಿ ಹೇಗೋ ಪಾಕ್ ಗಡಿಯೊಳಗೆ ನುಸುಳಿ, ರೈಲ್ವೆ ಹಳಿಗಳ ಮೇಲೆ ವಾಸ್ತವ್ಯ ಹೂಡಿದ್ದರು. ಅವರನ್ನು ಅಲ್ಲಿಂದಲೇ ವಾಪಸ್ ಕಳುಹಿಸಲಾಗಿದೆ.
ಅಫ್ಘಾನ್ ಸ್ಥಿತಿ ಕುರಿತು ಚರ್ಚೆ: ಬುಧವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಷ್ಯಾ ಎನ್ ಎಸ್‌ಎ ಜ| ನಿಕೋಲೆ ಪಟ್ರಾಶೆವ್ ಹೊಸದಿಲ್ಲಿಯಲ್ಲಿ ಮಾತುಕತೆ ನಡೆಸಿದ್ದು, ಅಫ್ಘಾನ್ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ತಾಲಿಬಾನ್ ಆಡಳಿತದಿಂದ ಭದ್ರತಾ ಅಪಾಯ ಉಂಟಾಗಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ಪಾಕ್ ವಿರುದ್ಧ ಭಾರತ ಕಿಡಿ: ತನ್ನ ದೇಶದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲೂ “ಹಿಂಸೆಯ ಸಂಸ್ಕೃತಿ’ಯನ್ನು ಪಾಕಿಸ್ಥಾನ ಪಸರಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಕಿಡಿಕಾರಿದೆ.