ಗುರುಗ್ರಾಮ್: ಈ ಮದುವೆಯಲ್ಲಿ ಜನರಿದ್ದಾರೆ. ಸಂಭ್ರಮ, ಸಡಗರವಿದೆ. ಹಳದಿ ಸಂಪ್ರದಾಯ, ಮಹೆಂದಿ, ದಿಬ್ಬಣವೂ ಬಂದಿದೆ. ಒಟ್ಟಿನಲ್ಲಿ ಅದ್ಧೂರಿ ಮದುವೆಯಲ್ಲಿ ಏನೆಲ್ಲಾ ಇರುತ್ತದೆ ಅದೆಲ್ಲವೂ ಈ ಮದುವೆಯಲ್ಲಿದೆ. ಆದರೆ ಇದು ನಾಯಿಗಳ ಮದುವೆ.!
ಹೌದು. ಇಂಥದ್ದೊಂದು ಮದುವೆ ಹರಿಯಾಣದ ಗುರುಗ್ರಾಮ್ ನಲ್ಲಿ ನೆರವೇರಿದೆ. ಸವಿತಾ ದಂಪತಿ ತಮ್ಮ ಪ್ರೀತಿಯ ಹೆಣ್ಣು ನಾಯಿ ʼಸ್ವೀಟಿʼಗೆ ಪಕ್ಕದ ಮನೆಯ ಗಂಡು ನಾಯಿ ʼಶೇರುʼ ಜೊತೆ ಭಾರತೀಯ ಸಂಪ್ರದಾಯದ ಪ್ರಕಾರ ಸಪ್ತಪದಿಯೊಂದಿಗೆ ವಿವಾಹ ಮಾಡಿಸಿದ್ದಾರೆ.
ಈ ಬಗ್ಗೆ ಮಾತಾನಾಡುವ ʼಸ್ವೀಟಿʼಯ ಮಾಲಕಿ ಸವಿತಾ “ನಾನೊಬ್ಬಳು ಪ್ರಾಣಿ ಪ್ರಿಯೆ. ನಾನು ನನ್ನ ಗಂಡ ನಮ್ಮ ಸ್ವೀಟಿಯನ್ನು ನೋಡಿಕೊಳ್ಳುತ್ತೇವೆ. ನಮಗೆ ಮಕ್ಕಳಿಲ್ಲ. ಸ್ವೀಟಿಯೇ ನಮ್ಮ ಮಗು. ನನ್ನ ಗಂಡ ದೇವಸ್ಥಾನಕ್ಕೆ ಹೋಗಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಅದೊಂದು ದಿನ ಬೀದಿ ನಾಯಿಯೊಂದು ( ಸ್ವೀಟಿ) ಅವರನ್ನು ಹಿಂಬಾಲಿಸಿಕೊಂಡು ಬಂತು. ಸ್ವೀಟಿಯನ್ನು ಮದುವೆ ಮಾಡಿಸಬೇಕೆಂದು ಎಲ್ಲರೂ ಹೇಳುತ್ತಿದ್ದರು. ಅದರಂತೆ ನಾವು ಚರ್ಚಿಸಿ ನಾಲ್ಕೇ ದಿನದಲ್ಲಿ ಸಂಪ್ರದಾಯದ ಅನುಸಾರವಾಗಿ ವಿವಾಹವನ್ನು ಮಾಡಿಸಲು ಸಿದ್ದರಾದೆವು” ಎಂದು ಹೇಳಿದ್ದಾರೆ.
ಮದುವೆಗೂ ಮುನ್ನ ಹಳದಿ ಕಾರ್ಯಕ್ರಮ ಹಾಗೂ ಎರಡೂ ನಾಯಿಗಳ ಮೆಹೆಂದಿಯನ್ನು ಮನೆಯವರು ಇಟ್ಟಿದ್ದಾರೆ.
ʼಶೇರುʼ ಅವರ ಮಾಲಕಿ ಮನಿತಾ ಈ ಬಗ್ಗೆ ಮಾತಾನಾಡಿ, “ಕಳೆದ ಎಂಟು ವರ್ಷದಿಂದ ನಾವು ಶೇರು ಜೊತೆಗೆ ಇದ್ದೇವೆ. ನಾವು ನಮ್ಮ ಮಗುವಿನಂತೆ ಶೇರುವನ್ನು ನೋಡಿಕೊಂಡಿದ್ದೇವೆ. ಹೀಗೆಯೇ ನಮ್ಮ ಪಕ್ಕದ ಮನೆಯ ಅವರ ಬಳಿ ಶೇರು ಮದುವೆ ಬಗ್ಗೆ ಮಾತಾನಾಡಿದ್ದೀವಿ ಬಳಿಕ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಮದುವೆ ಸಿದ್ದರಾದೆವು” ಎಂದರು.
ಶೇರು – ಸ್ವೀಟಿ ಮದುವೆಗಾಗಿ 100 ಜನರನ್ನು ಆಮಂತ್ರಿಸಿದ್ದು, ಆನ್ಲೈನ್ ಮೂಲಕ ಕಾರ್ಡ್ ಗಳನ್ನು ತರಿಸಿದ್ದಾರೆ.
ನಮ್ಮ ಈ ಮದುವೆಯ ಯೋಜನೆ ಕೆಲವರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಇಷ್ಟವಾಗಲ್ಲ. ನಾವು ಅದನ್ನು ಚಿಂತೆ ಮಾಡಲ್ಲ. ಏನು ಅಂದುಕೊಂಡಿದ್ದೇವೆಯೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಸವಿತಾ ಮಾತಾನಾಡುತ್ತಾ “ ಕೆಲವರು ನಾವು ಈ ರೀತಿ ಮದುವೆ ಮಾಡಿಸಿದರೆ ಪೊಲೀಸರು ನಮ್ಮನ್ನು ಬಂಧಿಸುತ್ತಾರೆ ಎಂದು ಹೇಳುತ್ತಾರೆ. ನಮಗೆ ಮಕ್ಕಳಿಲ್ಲ. ಸ್ವೀಟಿಯ ಮದುವೆಯೇ ನಮ್ಮ ಖುಷಿ. ನಾವಿಂದು ಸಂತೋಷದಿಂದ ಇದ್ದೇವೆ ನಮ್ಮ ʼಸ್ವೀಟಿʼ ಮದುವೆಯಾಗಲಿದ್ದಾರೆ” ಎಂದು ಹೇಳಿದರು.
“ಸ್ವೀಟಿ ನಮ್ಮೊಂದಿಗೆ ಕಳೆದ ಮೂರು ವರ್ಷದಿಂದ ಜೊತೆಯಾಗಿದ್ದಾಳೆ. ಅವಳು ಮದುವೆಯ ದಿನ ತುಂಬಾ ದುಃಖಿತರಾಗಿದ್ದನ್ನು ನಾನು ನೋಡಿದೆ. ನಮಗೆ ಮಕ್ಕಳಿಲ್ಲ. ನಾನು ದೇವಸ್ಥಾನಕ್ಕೆ ಪ್ರತಿದಿನ ಹೋಗುತ್ತಿದ್ದೆ. ಸ್ವೀಟಿ ನನ್ನ ಮಗಳ ಹಾಗೆ. ಮದುವೆಗಾಗಿ ನಾವು ಸಾರಿಯನ್ನು ತಂದಿದ್ದೇವೆ, ಶಾಮಿಯಾನ ಎಲ್ಲವನ್ನು ಹಾಕಿದ್ದೇವೆ ಎಂದು ಭಾವುಕರಾದರು” ಸವಿತಾ ಅವರ ಪತಿ ರಾಜ.
ಜನ ಜಂಗುಳಿಯೊಂದಿಗೆ ದಿಬ್ಬಣ್ಣ, ಮೆರವಣಿಗೆ ನೃತ್ಯದೊಂದಿಗೆ ʼಸ್ವೀಟಿ – ಶೇರುʼ ಮದುವೆ ನೆರವೇರಿದೆ.