ಅಮೃತಸರ : ತಲೆ ಮರೆಸಿಕೊಂಡಿರುವ ಖಲಿಸ್ಥಾನ್ ಪರ ನಾಯಕ ಅಮೃತಪಾಲ್ ಸಿಂಗ್ ನ ಪತ್ನಿ ಕಿರಣ್‌ದೀಪ್ ಕೌರ್ ಅವರನ್ನು ಇಂಗ್ಲೆಂಡ್ ಗೆ ಪ್ರಯಾಣಿಸುವುದಕ್ಕೆ ಗುರುವಾರ ತಡೆಹಿಡಿಯಲಾಗಿದೆ. ಆಕೆ ಈಗಾಗಲೇ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಇದು ಬಂಧನವಲ್ಲ ಎಂದು ಮೂಲಗಳು ತಿಳಿಸಿವೆ.
ಪತಿಯ ಹಿನ್ನೆಲೆಯನ್ನು ಪರಿಗಣಿಸಿ ವಲಸೆ ಅಧಿಕಾರಿಗಳು ಕಿರಣದೀಪ್ ಅವರನ್ನು ವಿಚಾರಣೆಗಾಗಿ ತಡೆದು ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕಿರಣ್‌ದೀಪ್ ವಾರಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಅಮೃತಪಾಲ್ ಸಿಂಗ್ ಇರುವಿಕೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದರು. ಪತಿಯನ್ನು ಸಮರ್ಥಿಸಿಕೊಂಡು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿರುವ ರೀತಿ ಕಾನೂನುಬಾಹಿರ ಎಂದು ಪ್ರತಿಪಾದಿಸಿದ್ದರು.ಸದ್ಯ ನನಗೆ
ಅಮೃತಪಾಲ್ ರೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಅವನು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದು ಹೇಳಿದ್ದರು.
29 ವರ್ಷದ ಕಿರಣದೀಪ್ ಯುಕೆ ಮೂಲದ ಎನ್‌ಆರ್‌ಐ ಆಗಿದ್ದು, ಅಮೃತಪಾಲ್‌ನ ಚಟುವಟಿಕೆಗಳು ಮತ್ತು ಸಂಸ್ಥೆ ‘ವಾರಿಸ್ ಪಂಜಾಬ್ ದೇ’ಗೆ ವಿದೇಶಿ ಮೂಲಗಳಿಂದ ಹಣವನ್ನು ಸಂಗ್ರಹಿಸುವಲ್ಲಿ ಆಕೆಯ ಹೆಸರು ಕಾಣಿಸಿಕೊಂಡಿದ್ದರಿಂದ ಪಂಜಾಬ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.