ನವದೆಹಲಿ: ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ(ಸಿಸಿಪಿಐ)-2023 ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನ ಪಡೆದಿದೆ. ದೇಶದಲ್ಲಿ ನವೀಕರಿಸಬಹುದಾದ ಇಂಧನದ ಬಳಕೆ ಹೆಚ್ಚಳದ ಹಿನ್ನೆಲೆಯಲ್ಲಿ ಈ ಸುಧಾರಣೆ ಸಾಧ್ಯವಾಗಿದೆ.
ಜರ್ಮನ್‌ವಾಚ್, ನ್ಯೂ ಕ್ಲೈಮೆಟ್ ಇನ್ಸ್ಟಿಟ್ಯೂಟ್ ಮತ್ತು ದಿ ಕ್ಲೈಮೆಟ್ ಆ್ಯಕ್ಷನ್ ನೆಟ್‌ವರ್ಕ್ ಎಂಬ ಮೂರು ಪರಿಸರಕ್ಕೆ ಸಂಬಂಧಿಸಿದ ಎನ್‌ಜಿಒಗಳು, ಐರೋಪ್ಯ ಒಕ್ಕೂಟ ಹಾಗೂ ಇತರೆ 59 ದೇಶಗಳಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮೀಕ್ಷೆಯ ವರದಿ ಆಧಾರದಲ್ಲಿ ಸೋಮವಾರ ಸಿಸಿಪಿಐ-2023 ಪಟ್ಟಿ ಬಿಡುಗಡೆಗೊಳಿಸಿವೆ.
ಯಾವುದೇ ದೇಶವು ಎಲ್ಲ ಸೂಚ್ಯಂಕ ವಿಭಾಗಗಳಲ್ಲಿ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಖಾಲಿ ಬಿಡಲಾಗಿದೆ. ಡೆನ್ಮಾರ್ಕ್ ನಾಲ್ಕನೇ ಸ್ಥಾನದಲ್ಲಿದೆ. ಸ್ವೀಡನ್ ಮತ್ತು ಚಿಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.
ಭಾರತವು ಜಿಎಚ್‌ಜಿ ಹೊರಸೂಸುವಿಕೆ ಮತ್ತು ಇಂಧನ ಬಳಕೆಯ ವಿಭಾಗಗಳಲ್ಲಿ ಹೆಚ್ಚಿನ ರೇಟಿಂಗ್ ಗಳಿಸಿದೆ. ಆದರೆ ಹವಾಮಾನ ನೀತಿ ಮತ್ತು ನವೀಕರಿಸಬಹುದಾದ ಇಂಧನ ವಿಭಾಗಗಳಲ್ಲಿ ಮಧ್ಯಮ ರೇಟಿಂಗ್ ಪಡೆದುಕೊಂಡಿದೆ.
ವಿಶ್ವದ ಒಟ್ಟು ಹೊರಸೂಸುವಿಕೆ ಪ್ರಮಾಣದಲ್ಲಿ ಭಾರತವು ಶೇ.4ಕ್ಕಿಂತ ಕಡಿಮೆ ಹೊಂದಿದ್ದರೂ ಸಹ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ದೇಶವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
– ಭೂಪೇಂದ್ರ ಯಾದವ್, ಕೇಂದ್ರ ಪರಿಸರ ಸಚಿವ