ಚೆನ್ನೈ : ಧನುಶ್ ಅಭಿನಯದ ಅಸುರನ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟ ನಿತೀಶ್ ವೀರಾ ( 45) ಸೋಮವಾರ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್ ಪಾಸಿಟಿವ್ ಸೋಂಕಿನಿಂದ ಬಳಲುತ್ತಿದ್ದ ನಿತೀಶ್ ವೀರಾ ಚೆನ್ನೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಉಸಿರು ಚೆಲ್ಲಿದ್ದಾರೆ.
ನಿತೀಶ್ ವೀರಾ ಕಳೆದ 20 ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. 2000ನೇ ವರ್ಷದಲ್ಲಿ ತೆರೆಕಂಡ ‘ವಲ್ಲರಸು’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ನಿತೀಶ್ ವೀರಾ ನಂತರ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪುದುಪೇಟೈ, ಪೇರರಸು, ರಜನಿಕಾಂತ್ ನಟಿಸಿದ್ದ ಕಾಲಾ, ಧನುಶ್ ಅಭಿನಯಿಸಿದ್ದ ಅಸುರನ್, ಪಡೈ ವೀರನ್, ಐರಾ, ನೀಯಾ 2 ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ಲಾಭಂ ಹಾಗೂ ನೇರೋ ಎಂಬ ಎರಡು ಸಿನಿಮಾ ಬಿಡುಗಡೆಯಾಗಬೇಕಿದೆ. ಇವರು ಧನುಷ್ ಅವರ ಅಸುರನ್ ಸಿನಿಮಾದಲ್ಲಿ ಪಾಂಡೈಯನ್ ಪಾತ್ರಕ್ಕೆ ಜೀವ ತುಂಬಿದ್ದರು.
ನಿತೀಶ್ ವೀರಾ ಅವರ ಸಾವು ತಮಿಳು ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಇವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬಿನಿ ಮಿಡಿದಿದ್ದಾರೆ.