Advertisement

ಚಳ್ಳಕೆರೆ ನೆಲದಲ್ಲಿ ಗಗನಯಾತ್ರಿ ತರಬೇತಿ ಕೇಂದ್ರ

03:25 PM Jan 21, 2020 | Suhan S |

ನಾಯಕನಹಟ್ಟಿ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಹಾಗೂನಾಯಕನ ಹಟ್ಟಿ ಸಮೀಪದ ಕುದಾಪುರಪ್ರದೇಶದಲ್ಲಿ 2700 ಕೋಟಿ ರೂ. ವೆಚ್ಚದಲ್ಲಿ ದೇಶದ ಮೊದಲ ಗಗನಯಾತ್ರಿ ತರಬೇತಿ ಕೇಂದ್ರ ತಲೆ ಎತ್ತಲಿದ್ದು, 2023ರಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

Advertisement

ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ವಿಶೇಷ ಕೇಂದ್ರ ಸ್ಥಾಪಿಸಲು ಕಾರ್ಯಾ ಯೋಜನೆ ಆರಂಭಿಸಿದೆ. ಭೂಮಿಯ ವಾತಾವರಣದಿಂದ ಮೇಲಿರುವ ಗಾಳಿ ಇಲ್ಲದ ಪ್ರದೇಶವನ್ನು ನಿರ್ವಾತ ಅಥವಾ ವ್ಯೂಮ ಎಂದು ಕರೆಯಲಾಗುತ್ತದೆ. ವ್ಯೂಮ ದಲ್ಲಿ ಮಾನವನನ್ನು ಕಳಿಸಿ ಸಂಶೋಧನೆ ಕೈಗೊಂಡ ನಂತರ ಚಂದ್ರನ ಮೇಲೆ ಮಾನವನನ್ನು ಕಳಿಸುವ ಯೋಜನೆಯನ್ನು ಇಸ್ರೋ ಹೊಂದಿದೆ. ಹೀಗಾಗಿ ಸ್ವದೇಶಿ ನಿರ್ಮಿತ ಗಗನಯಾನಿ (ವ್ಯೂಮ ಯಾನಿ) ತರಬೇತಿ ಕೇಂದ್ರವನ್ನು ಸುಮಾರು 2700 ಕೋಟಿ ರೂ. (300 ಮಿಲಿಯನ್‌ ಡಾಲರ್‌) ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

2022ರಲ್ಲಿ ಭಾರತ ಗಗನಯಾನ ಕಾರ್ಯಕ್ರಮ ಯೋಜಿಸಿದೆ. ಈ ಯೋಜನೆಯ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ. ನಂತರದ ವರ್ಷಗಳಲ್ಲಿ ಜರುಗುವ ಗಗನಯಾನ, ಚಂದ್ರ ಯಾನ ಯೋಜನೆಗಳಿಗೆ ದೇಶೀಯವಾಗಿ ತರಬೇತಿ ನೀಡುವ ಉದ್ದೇಶ ಇಸ್ರೋಗೆ ಇದೆ. ಹ್ಯೂಮನ್‌ ಸ್ಪೇಸ್‌ ಪ್ಲೈಟ್‌ ಸೆಂಟರ್‌ (ಎಚ್‌ಎಸ್‌ ಎಫ್‌ಸಿ) ಎಂದು ಕರೆಯಲಾಗುವ ಈ ಕೇಂದ್ರವನ್ನು ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿದ್ದು, ನಂತರ ಚಳ್ಳಕೆರೆ ತಾಲೂಕಿನ ನೂತನ ಕೇಂದ್ರದಲ್ಲಿ 2023ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.

ದೊಡ್ಡಉಳ್ಳಾರ್ತಿಯಲ್ಲಿ ಪ್ರಾಯೋಗಿಕ ಕೇಂದ್ರ: 2010ರಲ್ಲಿ ರಾಜ್ಯ ಸರ್ಕಾರ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಕಾವಲು ಪ್ರದೇಶದಲ್ಲಿ ಸರ್ವೆ ನಂ.1ರಲ್ಲಿ 473 ಎಕರೆ ಪ್ರದೇಶವನ್ನು ಇಸ್ರೋಗೆ ಹಸ್ತಾಂತರ ಮಾಡಿದೆ. ಇದೇ ರೀತಿ ನಾಯಕನಹಟ್ಟಿ ಸಮೀಪ ಕುದಾಪುರದ ಸರ್ವೆ ನಂ.47ರಲ್ಲಿ 100 ಎಕರೆ ಪ್ರದೇಶವನ್ನು ನೀಡಲಾಗಿದೆ. ಈ ಪೈಕಿ ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ ಪ್ರಾಯೋಗಿಕ ಕೇಂದ್ರ ನಿರ್ಮಾಣವಾಗಲಿದೆ. ಕುದಾಪುರ ಪ್ರದೇಶದಲ್ಲಿ ಇಸ್ರೋ ಸಿಬ್ಬಂದಿಗೆ ನಿವಾಸ ಹಾಗೂ ಮೂಲಸೌಲಭ್ಯ ಒದಗಿಸಲಾಗುವುದು. ಎರಡೂ ಕೇಂದ್ರಗಳಲ್ಲಿ ಈಗಾಗಲೇ ಪ್ರದೇಶದ ಸುತ್ತ ಕಲ್ಲಿನ ಕಾಂಪೌಂಡ್‌ ನಿರ್ಮಿಸಲಾಗಿದೆ. ಜತೆಗೆ ವಾಣಿವಿಲಾಸ ಸಾಗರದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ಹೊಸ ಯೋಜನೆಗೆ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಚಾಲನೆ ನೀಡಿದ್ದಾರೆ. ಎಚ್‌ ಎಸ್‌ಎಫ್‌ಸಿ ಕಾರ್ಯಕ್ರಮಕ್ಕೆ ಡಾ| ಎಸ್‌. ಉನ್ನಿಕೃಷ್ಣನ್‌ ನಾಯರ್‌ ನಿರ್ದೇಶಕರಾಗಿದ್ದಾರೆ. ಪಿಎಸ್‌ಎಲ್‌ವಿ ಯೋಜನೆ ನಿರ್ದೇಶಕರಾಗಿದ್ದ ಪ್ರೊ|ಆರ್‌.ಹಟನ್‌ ಅವರನ್ನು ಯೋಜನಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಭವಿಷ್ಯದ ಗಗನ  ಯಾನ, ಚಂದ್ರಯಾನಕ್ಕೆ ಈ ಕೇಂದ್ರದಲ್ಲಿ ಗಗನ ಯಾನಿಗಳಿಗೆ ತರಬೇತಿ ನೀಡಲಾಗುವುದು. ಈಗಾಗಲೇ ರಷ್ಯಾ,ಅಮೆರಿಕ ಹಾಗೂ ಚೀನಾ ಮಾನವನನ್ನು ವ್ಯೂಮಕ್ಕೆ ಕಳುಹಿಸಿದೆ. ಈ ಯೋಜನೆ ಯಶಸ್ವಿಯಾದರೆ ದೇಶೀಯವಾಗಿ ಸಾಧನೆ ಮಾಡಿದ ಪ್ರಪಂಚದ ನಾಲ್ಕನೇ ದೇಶವಾಗಲಿದೆ.

Advertisement

10 ಸಾವಿರ ಕೋಟಿ ಯೋಜನೆ : ಇದು 10,000 ಕೋಟಿ ರೂ.ಗಳ ವೆಚ್ಚದ ಬೃಹತ್‌ ಯೋಜನೆಯಾಗಿದ್ದು, ಆರಂಭದಲ್ಲಿ 2,700 ಕೋಟಿ ರೂ.ಗೆ ಅನುಮತಿ ದೊರೆತಿದೆ. ಮೊದಲ ಗಗನ ಯಾತ್ರಿಗಳು ಸಿದ್ಧಗೊಂಡ ನಂತರ ಈ ಯೋಜನೆಗೆ ನಂತರದ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಮೊದಲು ಕುದಾಪುರ ಪ್ರದೇಶದಲ್ಲಿ ಚಂದ್ರಯಾನಕ್ಕಾಗಿ ಪ್ರಯೋಗಗಳನ್ನು ಕೈಗೊಳ್ಳಲಾಗಿತ್ತು. ಚಂದ್ರನನ್ನು ಹೋಲುವ ಒಂಭತ್ತು ಬೃಹತ್‌ ಕಂದಕಗಳನ್ನು ಇಲ್ಲಿನ ಪ್ರದೇಶದಲ್ಲಿ ಸೃಷ್ಟಿಸಿ ಲ್ಯಾಂಡರ್‌ ಹಾಗೂ ಆರ್ಬಿಟರ್‌ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದೀಗ ಚಿತ್ರದುರ್ಗ ಜಿಲ್ಲೆ ಗಗನಯಾನಿಗಳ ತರಬೇತಿ ಕೇಂದ್ರವಾಗಿ ದೇಶದ ಗಮನ ಸೆಳೆಯಲಿದೆ.

ಏಷ್ಯಾ ಖಂಡದ ಪ್ರಮುಖ ವಿಜ್ಞಾನ-ತಂತ್ರಜ್ಞಾನ ಕೇಂದ್ರ : ನಾಯಕನಹಟ್ಟಿ ಸಮೀಪವಿರುವ ರಕ್ಷಣಾ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಈಗಾಗಲೇ ಚಾಲಕ ರಹಿತ ವಿಮಾನಗಳ ಪರೀಕ್ಷೆಗಳು ಜರುಗುತ್ತಿವೆ. ಬಾಬಾ ಅಣುಶಕ್ತಿ ಕೇಂದ್ರ (ಬಿಎಆರ್‌ಸಿ) ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಣುಶಕ್ತಿ ಸಂಶೋಧನೆ ಕಾರ್ಯಕ್ರಮಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನ ಹಾಗೂ ಗಣಿತ ವಿಭಾಗಗಳಲ್ಲಿ ತರಬೇತಿ ನೀಡುತ್ತಿದೆ. ಹೀಗಾಗಿ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಇಲ್ಲಿನ ಪ್ರದೇಶದಲ್ಲಿ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸ್ತಿತ್ವ ಕಂಡುಕೊಳ್ಳುತ್ತಿವೆ. ಹಾಗಾಗಿ ಭವಿಷ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಏಷ್ಯಾ ಖಂಡದ ಪ್ರಮುಖ ವಿಜ್ಞಾನ ಹಾಗೂ ತಂತ್ರಜ್ಞಾನದ ಕೇಂದ್ರವಾಗಿ ಹೊರಹೊಮ್ಮಲಿದೆ.

Advertisement

Udayavani is now on Telegram. Click here to join our channel and stay updated with the latest news.

Next