ಬಹುಶಃ ಈ ತಿಂಗಳಲ್ಲಿ ಇದೇ ಶುಕ್ರವಾರ ಸ್ವಲ್ಪ ಕಡಿಮೆ ಬಿಡುಗಡೆಗಳಿರಬೇಕು. ಸದ್ಯದ ಮಾಹಿತಿಯ ಪ್ರಕಾರ, ಈ ವಾರ “ಅತಿರಥ’, “ಉಪ್ಪು ಹುಳಿ ಖಾರ’, “ಹನಿಹನಿ ಇಬ್ಬನಿ’, “ಮೋಂಬತ್ತಿ’ ಹಾಗೂ “ನಮ್ಮೂರಲಿ’ ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿವೆ. ಅದಕ್ಕೂ ಮುನ್ನ ಕಳೆದ ವಾರ ಎಂಟು, ಅದರ ಹಿಂದಿನ ವಾರ ಏಳು, ಅದರ ಹಿಂದೆ ಐದು ಅಂತ ನವೆಂಬರ್ ತಿಂಗಳ ಮೂರು ವಾರಗಳಲ್ಲಿ ಸುಮಾರು 20 ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ.
ಕನ್ನಡದಲ್ಲಿ ಯಾವತ್ತೂ ಬಿಡುಗಡೆಯಾಗದ ಇಷ್ಟೊಂದು ಸಂಖ್ಯೆಯ ಚಿತ್ರಗಳು, ಈಗ ಬಿಡುಗಡೆಯಾಗುತ್ತಿರುವುದಕ್ಕೆ ಕಾರಣ ಏನು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ಅದಕ್ಕೊಂದು ಉತ್ತರ ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಬಣಕಾರ್. ಉಮೇಶ್ ಬಣಕಾರ್ ಇತ್ತೀಚೆಗೆ ನಡೆದ “ಅರಣ್ಮಯಿ’ ಮತ್ತು “ಸರೋಜ’ ಎಂಬ ಎರಡು ಚಿತ್ರಗಳ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಅವರು ಇಷ್ಟೊಂದು ಬಿಡುಗಡೆಗೆ ಕಾರಣವೇನೆಂಬ ರಹಸ್ಯವನ್ನು ಬಿಚ್ಚಿಟ್ಟರು. ಅಂದಹಾಗೆ, ಈ ಕಾರಣವೇನು ಗೊತ್ತಾ? ಜ್ಯೋತಿಷಿಗಳು. ಜ್ಯೋತಿಷಿಗಳು ಚಿತ್ರದ ಪ್ರಾರಂಭವಾಗುವುದಕ್ಕೆ ಮುಹೂರ್ತ ಇಟ್ಟುಕೊಡುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಚಿತ್ರದ ಬಿಡುಗಡೆಗೂ ಮುಹೂರ್ತ ಇಟ್ಟುಕೊಡುತ್ತಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳು ಆಗುತ್ತಿವೆ ಎಂಬುದು ಅವರ ಅಭಿಪ್ರಾಯ.
“ವಾರದಿಂದ ವಾರಕ್ಕೆ ಹಲವು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಎಷ್ಟೋ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದ ಸಂದಭìದಲ್ಲಿ ನಾವು, ಒಂದೇ ವಾರದಲ್ಲಿ ಇಷ್ಟೊಂದು ಚಿತ್ರಗಳನ್ನು ಬಿಡುಗಡೆ ಮಾಡಿದರೆ ಯಾರೂ ಉಳಿಯುವುದಿಲ್ಲ ಎಂದು ಅವರಿಗೆ ಬುದ್ಧಿ ಹೇಳಿದ್ದೂ ಇದೆ. ಆದರೆ, ಹಲವರು ಜ್ಯೋತಿಷಿಗಳ ಮಾತು ಕೇಳಿಕೊಂಡು ಬಂದಿರುತ್ತಾರೆ. ಜ್ಯೋತಿಷಿಗಳು ಇಂಥ ದಿನ ಚಿತ್ರ ಬಿಡುಗಡೆ ಮಾಡಿದರೆ ಒಳ್ಳೆಯದು,
ಹಾಗೆ ಮಾಡಿದರೆ ದೊಡ್ಡ ಲಾಭವಿದೆ ಎಂದು ನಂಬಿಸಿ ಕಳಿಸಿರುವುದರಿಂದ ನಿರ್ಮಾಪಕರು ಯಾರ ಮಾತನ್ನೂ ಕೇಳುವುದಕ್ಕೆ ಸಿದ್ಧರಿರುವುದಿಲ್ಲ. ಎಷ್ಟೇ ಚಿತ್ರಗಳು ಬಿಡುಗಡೆಯಾದರೂ ಪರವಾಗಿಲ್ಲ, ಜ್ಯೋತಿಷಿಗಳು ಕೊಟ್ಟ ಡೇಟಿನಲ್ಲಿ ತಾವು ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಾರೆ. ಹಾಗಾಗಿ ಇಷ್ಟೆಲ್ಲಾ ಆಗುತ್ತಿದೆ. ಇಂಥ ವಿಷಯಗಳಲ್ಲಿ ದಯವಿಟ್ಟು ಜ್ಯೋತಿಷಿಗಳ ಮಾತು ಕೇಳಬೇಡಿ’ ಎಂದು ನಿರ್ಮಾಪಕರಿಗೆ ಬುದ್ಧಿಮಾತು ಹೇಳುತ್ತಾರೆ ಬಣಕಾರ್.
ಹಾಗಾದರೆ, ಇದನ್ನು ತಡೆಯುವುದಕ್ಕೆ ಸಾಧ್ಯವೇ ಇಲ್ಲವಾ? ಅದರಲ್ಲೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರೂ ಈ ವಿಷಯದಲ್ಲಿ ಏನೂ ಮಾಡುವುದಕ್ಕೆ ಆಗುವುದಿಲ್ಲವಾ ಎಂದರೆ, “ನಾವು ಒತ್ತಾಯ ಮಾಡಿದರೆ, ಕೇಸು ಬೀಳುತ್ತದೆ. ಇದನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಅಂತಲೇ ಈ ಹಿಂದೆ ಇದ್ದ ಸ್ಕ್ರೀನಿಂಗ್ ಕಮಿಟಿಯನ್ನು ಪುನಃ ತರಬೇಕು ಎಂಬ ಯೋಚನೆ ಇದೆ. ಯಾರು ಮೊದಲು ಸೆನ್ಸಾರ್ ಮಾಡಿಸುತ್ತಾರೋ, ಅವರಿಗೆ ಬಿಡುಗಡೆಗೆ ಮೊದಲ ಆದ್ಯತೆ.
ಹಾಗಾದಾಗ ಯಾರಿಗೂ ಸಮಸ್ಯೆ ಇರುವುದಿಲ್ಲ. ಈ ಸಮಿತಿ ಮುಂಚೆ ಇತ್ತು. ಆದರೆ, ಕಾರಣಾಂತರಗಳಿಂದ ರದ್ದಾಯಿತು. ಈಗ ಬಿಡುಗಡೆಯಲ್ಲಿ ಶಿಸ್ತು ತರುವ ಕಾರಣಕ್ಕೆ ಸ್ಕ್ರೀನಿಂಗ್ ಕಮಿಟಿ ಮತ್ತೆ ಶುರು ಮಾಡುವ ಯೋಚನೆ ಇದೆ. ಇದೇ ತಿಂಗಳ 27ರಂದು ಮಂಡಳಿಯ ಕಾರ್ಯಕಾರಿ ಸಮಿತಿ ಸಬೆ ಇದೆ. ಅಲ್ಲಿ, ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳುತ್ತಾರೆ ಬಣಕಾರ್.