Advertisement

ಜನ್ಮಾಂತರದ ಕಥೆ ಕಟ್ಟಿ ವಂಚಿಸಿದ ಜ್ಯೋತಿಷಿ ಸೆರೆ!

12:52 AM Aug 22, 2019 | Lakshmi GovindaRaj |

ಬೆಂಗಳೂರು: “ಕಳೆದ ಮೂರು ಜನ್ಮದಲ್ಲೂ ನೀನು ನನ್ನ ಪತ್ನಿಯಾಗಿದ್ದೆ’ ಎಂದು ಲೆಕ್ಕಪರಿಶೋಧಕ ಯುವತಿಯನ್ನು ನಂಬಿಸಿ ಆಕೆಯಿಂದಲೇ 30 ಲಕ್ಷ ರೂ. ಪಡೆದ ಜ್ಯೋತಿಷಿಗೆ ಮಹಿಳಾ ಸಂಘಟನೆಗಳ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ.

Advertisement

ಶ್ರೀನಿವಾಸನಗರದ ಕೃಷ್ಣಚಾರ್ಯ ಥಳಿತಕ್ಕೆ ಒಳಗಾದ ಜ್ಯೋತಿಷಿ. ಆರೋಪಿ, ನಗರದಲ್ಲಿ ವಾಸವಾಗಿರುವ 26 ವರ್ಷದ ಲೆಕ್ಕಪರಿಶೋಧಕಿಯನ್ನು ವಂಚಿಸಲು ಮುಂದಾಗಿದ್ದ. ಅಷ್ಟರಲ್ಲಿ ಪೋಷಕರಿಂದ ಈ ವಿಚಾರ ತಿಳಿದ ಮಹಿಳಾ ಸಂಘಟನೆ ಸದಸ್ಯರು ಆರೋಪಿಯನ್ನು ಆತನ ಮನೆ ಬಳಿಯೇ ಹಿಡಿದು ಧಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಶ್ರೀನಿವಾಸನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಆರೋಪಿ, ಹಲವು ವರ್ಷಗಳಿಂದ ಜ್ಯೋತಿಷ್ಯ, ವಾಸ್ತು ದೋಷ ಸರಿ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಎರಡು ವರ್ಷಗಳ ಹಿಂದೆ ವಿಜಯನಗರದಲ್ಲಿರುವ ಯುವತಿಯ ಮನೆಗೆ ವಾಸ್ತು ದೋಷ ನೋಡಲು ಹೋಗಿದ್ದ. ಈ ವೇಳೆ ಮನೆಯಲ್ಲಿ ಯಾವುದೇ ಶುಭಕಾರ್ಯಗಳು ಆಗುವುದಿಲ್ಲ.

ಅದಕ್ಕಾಗಿ ಹೋಮಗಳನ್ನು ಮಾಡಬೇಕೆಂದು, ಎರಡು ವರ್ಷಗಳಿಂದ ಹತ್ತಾರು ಹೋಮಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇದ್ದರೂ, ಯುವತಿಗೆ “ನನಗೂ ನಿನಗೂ ಮೂರು ಜನ್ಮಗಳ ಸಂಬಂಧವಿದೆ. ಜನ್ಮ ಜನ್ಮಾನಂತರದ ಅನುಬಂಧವಿದೆ. ಕಳೆದ ಜನ್ಮಗಳಲ್ಲಿ ನೀನು ನನ್ನ ಪತ್ನಿಯಾಗಿದ್ದೆ.

ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನನ್ನು ಮದುವೆಯಾದರೆ ಮೋಕ್ಷ ದೊರೆಯುತ್ತದೆ. ಹೀಗಾಗಿ ನಿನಗೆ ಇನ್ನೂ ವಿವಾಹ ನಿಶ್ಚಯವಾಗುತ್ತಿಲ್ಲ’ ಎಂದು ನಂಬಿಸಿದ್ದಾನೆ. ಅಲ್ಲದೆ, ತನ್ನ ಮನೆಗೂ ಕರೆದುಕೊಂಡು ಹೋಗಿ ಪೂಜೆಗಳನ್ನು ನೆರವೇರಿಸಿದ್ದಾನೆ ಎಂದು ಮಹಿಳಾ ಸಂಘಟನೆಯವರು ಆರೋಪಿಸಿದ್ದಾರೆ.

Advertisement

30 ಲಕ್ಷ ರೂ. ಕೊಟ್ಟಿದ್ದರು: “ಕಳೆದ ಜನ್ಮದಲ್ಲಿ ನೀನೊಬ್ಬಳು ದೊಡ್ಡ ಭರತನಾಟ್ಯ ಕಲಾವಿದೆಯಾಗಿದ್ದೆ. ಆಗ ನಿನ್ನ ಸಾವಿಗೆ ನಾನೇ ಕಾರಣನಾಗಿದ್ದೆ. ನೀನು ನನ್ನ ಸ್ವತ್ತು’ ಎಂದಿದ್ದ ಆರೋಪಿ, ನಿಂಬೆಹಣ್ಣು, ಹೆಣ್ಣಿನಗೊಂಬೆ, ಕರ್ಪೂರ ಇಟ್ಟುಕೊಂಡು ಕಚೇರಿಗೆ ಹೋಗುವಂತೆ ಯುವತಿಗೆ ಸೂಚಿಸಿದ್ದ ಎಂದು ಹೇಳಲಾಗಿದೆ. ಈ ನಡುವೆ ನಾನಾ ಕಾರಣಗಳನ್ನು ನೀಡಿ ಯುವತಿಯಿಂದ ಇದುವರೆಗೆ 30 ಲಕ್ಷ ರೂ.ಗಳನ್ನು ಆರೋಪಿ ಪಡೆದಿದ್ದಾನೆ. ಆಕೆ ಹೆಸರಿನಲ್ಲಿ ಕೆಲ ಬ್ಯಾಂಕ್‌ನಲ್ಲಿ ಸಾಲ ಕೊಡ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.

ಪುತ್ರಿಯ ವರ್ತನೆ ಕಂಡು ವಿಚಾರಿಸಿದಾಗ ಆಕೆ ಜ್ಯೋತಿಷಿ ಬಗ್ಗೆ ಹೇಳಿದ್ದರು. ನಂತರ ಮಹಿಳಾ ಸಂಘಟನೆಗಳ ನೆರವು ಕೋರಿದ್ದು, ಸಂಘಟನೆ ಸದಸ್ಯರು ಆರೋಪಿ ಬಳಿ ಹೋಗಿ ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಸದಸ್ಯರು, ಆತನ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಈ ಕೃತ್ಯಕ್ಕೆ ಆರೋಪಿಯ ಪತ್ನಿ ಕೂಡ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹನುಮಂತನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next