Advertisement
ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಅಂಕದ ಆಧಾರದಲ್ಲಿ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮಹಿಳಾ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಹೊರತುಪಡಿಸಿ, ಬೇರೆ ಯಾವುದೇ ವಿಭಾಗದಲ್ಲೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿಲ್ಲ ಮತ್ತು ಆಯ್ಕೆಯನ್ನು ಮಾಡಿಲ್ಲ. ಮಹಿಳಾ ಅಭ್ಯರ್ಥಿಗಳನ್ನು ಕೇವಲ ಶೇ. 33ರಷ್ಟು ಮೀಸಲಾತಿಗೆ ಸೀಮಿತಗೊಳಿಸಿ, ಉಳಿದ ಶೇ. 67ರಷ್ಟು ಮೀಸಲಾತಿಯನ್ನು ಪುರುಷರಿಗೆ ನೀಡಲಾಗಿದೆ. ಅಲ್ಲದೆ ವಿವಿಧ ವರ್ಗದಲ್ಲಿ ಹೆಚ್ಚು ಅಂಕವಿದ್ದು, ಸಾಮಾನ್ಯ ವರ್ಗದಡಿ ಉನ್ನತ ರ್‍ಯಾಂಕ್‌ನಲ್ಲಿ ಆಯ್ಕೆಯಾಗಬಹುದಾದ ಮಹಿಳಾ ಅಭ್ಯರ್ಥಿಯನ್ನು ಮೀಸಲು ಕೋಟಕ್ಕೆ ಸೀಮಿತಗೊಳಿಸಿ, ಆ ಜಾಗಕ್ಕೆ ಪುರುಷ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಮಹಿಳಾ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕನ್ನಡ ಮಾಧ್ಯಮ, ಗ್ರಾಮೀಣ ಮೀಸಲಾತಿ ಇತ್ಯಾದಿ ಯಾವುದನ್ನು ಗಣನೆಗೆ ತೆಗೆದುಕೊಂಡಿಲ್ಲ. ಆಯ್ಕೆ ಪಟ್ಟಿಯಲ್ಲಿ ಕಡಿಮೆ ಅಂಕ ಬಂದಿರುವವರು ಸಾಮಾನ್ಯ ವರ್ಗದಡಿ ಆಯ್ಕೆಯಾಗಿ ಹೆಚ್ಚು ಅಂಕ ಬಂದಿರುವ ಮಹಿಳಾ ಅಭ್ಯರ್ಥಿಯನ್ನು ಸಾಮಾನ್ಯ ವರ್ಗದ ಬದಲಿಗೆ ಮಹಿಳಾ ಮೀಸಲಾತಿಯಡಿ ಆಯ್ಕೆ ಮಾಡಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಯಾರಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಿದ್ದಾರೆ ಎಂಬುದನ್ನು ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳಾ ಅಭ್ಯರ್ಥಿಗಳಿಗೆ ಶೇ. 33ರಷ್ಟು ಮೀಸಲಾತಿ ಮಾತ್ರವೇ ನೀಡಲಾಗುವುದು, ಉಳಿದ ಯಾವುದೇ ವರ್ಗದಲ್ಲೂ ಸ್ಪರ್ಧೆ ಮಾಡಲು ಅವಕಾಶ ಇಲ್ಲ ಎಂಬುದನ್ನು ಅಧಿಸೂಚನೆಯಲ್ಲೇ ಹೇಳಬೇಕಿತ್ತು. ಅಧಿಸೂಚನೆ ಅಥವಾ ಬೇರೆ ಯಾವುದೇ ನೇಮಕಾತಿಯಲ್ಲೂ ಈ ರೀತಿಯ ನಿಯಮ ಇಲ್ಲ. ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಇತ್ಯಾದಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ಪಡೆದು, ನೇಮಕಾತಿಯನ್ನು ಮಾತ್ರ ಮಹಿಳಾ ಮೀಸಲಾತಿಯಡಿ ನೀಡಲಾಗಿದೆ. ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ವರ್ಗದಡಿ ಓರ್ವ ಮಹಿಳಾ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ ಎಂದು ನೊಂದ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.
Related Articles
ಸಹಾಯ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆ ನಿರ್ದಿಷ್ಟ ನಿಯಮದ ಆಧಾರದಲ್ಲೇ ನಡೆಯುತ್ತಿದೆ. ಯಾವುದೇ ಅಭ್ಯರ್ಥಿಗಳಿಗೆ ಈ ಬಗ್ಗೆ ಗೊಂದಲ ಅಥವಾ ಸ್ಪಷ್ಟತೆ ಇಲ್ಲದೆ ಇದ್ದಲ್ಲಿ ಬೆಂಗಳೂರಿನ ಮಲ್ಪೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಗೆ ಬಂದು ಈ ಸಂಬಂಧ ಸುತ್ತೋಲೆ ಮತ್ತು ನಿಯಮದ ಪ್ರತಿಯನ್ನು ಪಡೆದುಕೊಂಡು ಪರಿಶೀಲಿಸಬಹುದು. ನಿಯಮ ಮೀರಿ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್. ತಿಳಿಸಿದರು.
Advertisement