ಜೇವರ್ಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ 10 ದಿನಗಳಿಂದ ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹ ಬುಧವಾರ ಸಹಾಯಕ ಆಯುಕ್ತ ರಾಜಪ್ಪ ಅವರ ಭರವಸೆ ಮೇರೆಗೆ ಅಂತ್ಯಗೊಳಿಸಲಾಯಿತು.
ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಸಹಾಯಕ ಆಯುಕ್ತ ರಾಜಪ್ಪ ಮಾತನಾಡಿ, ಕಲ್ಲೂರ-ಚಿನಮಳ್ಳಿ ನಡುವಿನ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಪ್ರವಾಹ ಬಂದು ಸಂಭವಿಸಿರುವ ಹಾನಿ ಬಗ್ಗೆ ಕಂದಾಯ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ 15 ತೊಗರಿ ಖರೀದಿ ಕೆಂದ್ರಗಳನ್ನು ತೆಗೆಯಲು ಕ್ರಮಕೈಗೊಳ್ಳಲಾಗುವುದು. ವಾರಾಬಂದಿರದ್ದು ಮಾಡಿ ಡಿ.31 ರ ವರೆಗೆ ಕಾಲುವೆಗೆ ನೀರು ಹರಿಸುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಲಾರ ಕಂಪನಿಯಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡಲು ಕಂಪನಿ ಒಪ್ಪಿಗೆ ನೀಡಿದೆ. ಅಲ್ಲದೇ ಎಲ್ಲ ಪ್ರಮುಖ ಬೇಡಿಕೆಗಳ ಈಡೇರಿಕೆ ಬಗ್ಗೆ ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಆದ್ದರಿಂದ ಧರಣಿ ಕೈಬಿಡುವಂತೆ ಮನವಿ ಮಾಡಲಾಗಿದೆ. ಮನವಿಗೆ ಧರಣಿ ನಿರತರು ಸ್ಪಂದಿಸಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ತಾಲೂಕಿನಲ್ಲಿ ಕಾಟಾಚಾರಕ್ಕೆ
ಜೆಡಿಎಸ್ ಎಂದೂ ಹೋರಾಟ ಮಾಡಿಲ್ಲ. ರೈತರ, ದೀನ, ದಲಿತರ, ಅಲ್ಪಸಂಖ್ಯಾತ, ಬಡವರ ಪರವಾಗಿ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಪ್ರಮುಖವಾದ ಏಳು ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಸೂಕ್ತ ಭರವಸೆ ನೀಡಿರುವುದರಿಂದ ಧರಣಿ ಕೈಬಿಡಲಾಗುತ್ತಿದೆ ಎಂದರು.
ಜೆಡಿಎಸ್ ಮುಖಂಡರು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಎಸ್.ಎಸ್.ಸಲಗರ, ತಾಪಂ ಉಪಾಧ್ಯಕ್ಷ ಗೊಲ್ಲಾಳಪ್ಪ ಪೂಜಾರಿ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ಕುಸ್ತಿ, ಶೇಖ ಫರೀದ್ ಮಳ್ಳಿಕರ್, ಚಂದ್ರಶೇಖರ ಮಲ್ಲಾಬಾದ, ಸದಾನಂದ ಪಾಟೀಲ, ಚನ್ನಮಲ್ಲಯ್ಯ ಹಿರೇಮಠ, ಶಂಕರಲಿಂಗ ಕರಕಿಹಳ್ಳಿ, ಕೇರನಾಥ ಪಾರ್ಶಿ, ಬಾಬಾ ಹನೀಫ್, ನಿಂಗಣ್ಣ ರದ್ದೇವಾಡಗಿ, ವಿಜಯಕುಮಾರ ಹಿರೇಮಠ, ಡಿ.ಕೆ.ದಾವೂದ್, ಖಯೂಮ್ ಜಮಾದಾರ, ಸಿದ್ದು ಮಾವನೂರ ಮತ್ತಿತರರು ಭಾಗವಹಿಸಿದ್ದರು.