Advertisement

ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗೆ ಅನುದಾನ

06:40 AM Sep 17, 2018 | Team Udayavani |

ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಬಂಜಾರ ಸಮುದಾಯದವರ ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಪ್ರಥಮ ಬಾರಿಗೆ ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ 10 ಲಕ್ಷ ರೂ.ವರೆಗೆ ಅನುದಾನ ನೀಡಲು ಮುಂದಾಗಿದೆ.

Advertisement

ಶಿಥಿಲಾವಸ್ಥೆಯಲ್ಲಿರುವ ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ, ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ಪುನರುಜ್ಜೀನವನಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಕೋಟಿ ರೂ. ವೆಚ್ಚ ಮಾಡಿ ಅಭಿವೃದ್ಧಿಪಡಿಸಲು ಇಲಾಖೆ ಯೋಜನೆ ರೂಪಿಸಿದ್ದು, ಸೋಮವಾರ ಚಾಲನೆ ಸಿಗಲಿದೆ.

ರಾಜ್ಯದಲ್ಲಿ ಸುಮಾರು 3373 ತಾಂಡಾಗಳಿದ್ದು, ಬಹಳಷ್ಟು ತಾಂಡಾಗಳು ಅರಣ್ಯ, ಗುಡ್ಡಗಾಡು ಪ್ರದೇಶ, ದಾಖಲೆರಹಿತ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿವೆ. ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ದಾವಣಗೆರೆ, ಚಾಮರಾಜನಗರ ಸೇರಿದಂತೆ 14 ಜಿಲ್ಲೆಗಳಲ್ಲಿ ಬಂಜಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಗಳಲ್ಲಿ ಬಂಜಾರ ಸಮುದಾಯವೂ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ತನ್ನದೇ ಆದ ಭಾಷೆ, ವಿಭಿನ್ನ ಕಲೆ, ಸಂಸ್ಕೃತಿ, ವೇಷಭೂಷಣ, ರೀತಿ ನೀತಿ, ಆಚಾರ- ವಿಚಾರ ಹೊಂದಿದೆ.

ಇತರೆ ಪರಿಶಿಷ್ಟ ಸಮುದಾಯದ ಜನರು ನಾನಾ ದೇವ- ದೇವತೆಗಳನ್ನು ಆರಾಧಿಸಿದರೆ ಬಂಜಾರ ಸಮುದಾಯವರು ಸೇವಾಲಾಲ್‌ ಹಾಗೂ ಮರ್ಗಮ್ಮನ ಆರಾಧಕರಾಗಿದ್ದಾರೆ. ಈ ಎರಡೂ ದೇವರನ್ನು ಅಕ್ಕಪಕ್ಕ ಪ್ರತಿಷ್ಠಾಪಿಸಿ ಪ್ರತ್ಯೇಕವಾಗಿ “ಮs…’ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿಕೊಂಡು ಆರಾಧಿಸುತ್ತಾ ಬಂದಿದ್ದಾರೆ. ಈ ಕೇಂದ್ರದ ವಿನ್ಯಾಸವೂ ವಿಭಿನ್ನ ಹಾಗೂ ಆಕರ್ಷಕವಾಗಿರುತ್ತದೆ.

Advertisement

ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರ
ಸಮುದಾಯಕ್ಕೆ ಸಂಬಂಧಪಟ್ಟಂತೆ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವುದು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಇತರೆ ಶುಭ ಸಮಾರಂಭಗಳನ್ನು ನಡೆಸುವುದು ಇದೇ ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರದಲ್ಲಿ. ಆ ಮೂಲಕ ಈ ಕೇಂದ್ರವು ಸಮುದಾಯದವರ ಸಂಘಟನೆಯ ಕೇಂದ್ರಬಿಂದು ಎನಿಸಿದೆ.ಆದರೆ ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಅವರ ಸಂಸ್ಕೃತಿಯಲ್ಲೂ ಬದಲಾವಣೆಗಳಾಗುತ್ತಿರುವ ಹೊತ್ತಿನಲ್ಲೇ ಅವರ ಸಂಸ್ಕೃತಿಯನ್ನು ಉಳಿಸುವ ಜತೆಗೆ ಸಂಸ್ಕೃತಿ ಆಚರಣೆಗೆ ಪ್ರೋತ್ಸಾಹಿಸಲು ಇಲಾಖೆ ಸಜ್ಜಾಗಿದೆ. ಅಲ್ಲದೆ ಬಂಜಾರ ಸಮುದಾಯದವರೊಂದಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಬೆಸೆದುಕೊಂಡಿರುವ ಈ ಕೇಂದ್ರಗಳನ್ನು ಸಂರಕ್ಷಿಸಬೇಕು ಎಂದು ತಾಂಡಾ ಅಭಿವೃದ್ಧಿ ನಿಗಮದ ನಿಯಮಗಳಲ್ಲಿದೆ. ಆದರೆ ಹಲವೆಡೆ ಈ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿದ್ದು, ಮುಜರಾಯಿ ಇಲಾಖೆಯಿಂದಲೂ ಹೆಚ್ಚಿನ ನೆರವು ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರಗಳ ಪುನರುಜ್ಜೀವನಕ್ಕೆ ಅನುದಾನ ನೀಡಿ ಅಭಿವೃದ್ಧಿಪಡಿಸಲು ಇಲಾಖೆ ಮುಂದಾಗಿದೆ.

4 ಲಕ್ಷದಿಂದ 10 ಲಕ್ಷ ರೂ. ಸಹಾಯಧನ
ಶಿಥಿಲಾವಸ್ಥೆಯಲ್ಲಿರುವ ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರಗಳನ್ನು ಗುರುತಿಸಿ ಅಗತ್ಯಬಿದ್ದರೆ ಪುನರ್‌ನಿರ್ಮಾಣ, ನವೀಕರಣ, ಅಭಿವೃದ್ಧಿಗೆ ಅನುದಾನ ನೀಡಲಿದೆ. ಸ್ಥಳೀಯ ಚುನಾಯಿತ ಜನಪ್ರತಿನಿಧಿ ಹಾಗೂ ವಿಕಾಸ ಸಮಿತಿಗಳೊಂದಿಗೆ ಸಮಾಲೋಚಿಸಿ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧಪಡಿಸಿ ನಿಗಮಕ್ಕೆ ಸಲ್ಲಿಸಬೇಕಾಗುತ್ತದೆ. ನಿಗಮದ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿ ಅನುಮೋದನೆಗೆ ಸಲ್ಲಿಸಲಿದ್ದಾರೆ. ಪ್ರಸಕ್ತ ವರ್ಷದಲ್ಲಿ 800 ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ಕನಿಷ್ಠ 4 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ನೀಡಲಿದೆ.

ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಬಂಜಾರಾ ಸಮುದಾಯದವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಜತೆಗೆ ಅವರ ಸಾಂಸ್ಕೃತಿಕ ಕೇಂದ್ರಗಳ ಪುನರುಜ್ಜೀವನಕ್ಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅನುದಾನ ನೀಡಲು ನಿರ್ಧರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 800 ಸೇರಿದಂತೆ ಮೂರು ವರ್ಷದಲ್ಲಿ 1,500 ಸಾಂಸ್ಕೃತಿಕ ಕೇಂದ್ರಗಳಿಗೆ ಒಟ್ಟು 60 ಕೋಟಿ ರೂ. ಅನುದಾನ ನೀಡಲಾಗುವುದು. ಆ ಮೂಲಕ ಬಂಜಾರ ಸಮುದಾಯದವರ ಸಂಸ್ಕೃತಿಯನ್ನು ಸಂರಕ್ಷಿಸಿ ಆಚರಣೆಗೆ ಪ್ರೋತ್ಸಾಹಿಸುವುದು ನಮ್ಮ ಉದ್ದೇಶ.
– ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next