ಬೆಂಗಳೂರು: ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ರಾಜ್ಯದ ಹುತಾತ್ಮ ಯೋಧರ ಕುಟುಂಬಕ್ಕೆ ಅನುಕೂಲ ಮಾಡಿಕೊಡುವ ಕಾರ್ಯಕ್ರಮ ರೂಪಿಸಿದರೆ ಅದನ್ನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯಶಾಲಿಯಾಗಿ 19 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿಟಿಜನ್ಸ್ ಸೌಸೈಟಿ ಆಫ್ ಇಂಡಿಯಾ ಕನ್ಯಾಕುಮಾರಿಯಿಂದ ದೆಹಲಿವರೆಗೆ ಕೊಂಡೊಯ್ಯುತ್ತಿರುವ ಶ್ರದ್ಧಾಂಜಲಿ ಕಲಶಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಮಡಿದವರನ್ನು ನೆನಪಿಸಿಕೊಂಡು ಪ್ರತಿ ವರ್ಷ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಯೋಧರಿಗೆ ಗೌರವ ಸಲ್ಲಿಸುತ್ತಿರುವುದು ಉತ್ತಮ ಕಾರ್ಯ. ಇದರೊಂದಿಗೆ ಮುಂದಿನ ವರ್ಷದಿಂದ ಕಾರ್ಗಿಲ್ ದಿನಾಚರಣೆ ವೇಳೆ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ರಾಜ್ಯದ ಯೋಧರ ಕುಟುಂಬಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಆಯೋಜಕರು ಯೋಜನೆ ಸಿದ್ಧಪಡಿಸಿದರೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅದನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಏರ್ ಕಮಾಂಡರ್ ಚಂದ್ರಶೇಖರ್ ಅವರು ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ಯೋಧರು ಅನುಭವಿಸಿದ ಕಷ್ಟ, ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರಕ್ಕೆ ತೆರಳಿ ವೈರಿಗಳನ್ನು ಸದೆಬಡಿದು ವೀರಮರಣವನ್ನಪ್ಪಿದ ಯೋಧರ ತ್ಯಾಗವನ್ನು ನೆನೆದು ಭಾವುಕರಾದರು ಅಲ್ಲದೆ, ಈ ಯುದ್ಧ ಭಾರತದ ಘನತೆ ಮತ್ತು ವೈಭವವನ್ನು ವಿಶ್ವಕ್ಕೆ ಸಾರಿತು ಎಂದು ಬಣ್ಣಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕರ್ನಲ್ ಮಂಜೀತ್ ಸಿಂಗ್, ಕ್ಯಾಪ್ಟನ್ ಚಿದಂಬರಂ, ಕಮಾಂಡರ್ ಪಿ.ಆರ್.ಚೇತನ್, ಆಸಿಮ್ ಘೋಷ್, ಎಸ್.ಸಿ.ಭಂಡಾರಿ ಸೇರಿದಂತೆ ಭಾರತೀಯ ಸೇನಾಪಡೆಗಳ ಹಿರಿಯ ಅಧಿಕಾರಿಗಳು, ಜವಾನರು, ಕಾರ್ಗಿಲ್ ಯೋಧರ ಕುಟುಂಬ ಸದಸ್ಯರು ಹಾಜರಿದ್ದರು. ಇದೇ ವೇಳೆ ಶ್ರದ್ಧಾಂಜಲಿ ಕಲಶಕ್ಕೆ ಗೌರವ ಸಲ್ಲಿಸಲಾಯಿತು.
26ರಂದು ದೆಹಲಿ ತಲುಪುವ ಕಲಶ: ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸುವ ಶ್ರದ್ಧಾಂಜಲಿ ಕಲಶ ಕನ್ಯಾಕುಮಾರಿಯಿಂದ ಹೊರಟು ಇದೀಗ ಬೆಂಗಳೂರಿಗೆ ಬಂದಿದೆ. ಜು.26ರಂದು ದೆಹಲಿಯ ಇಂಡಿಯಾ ಗೇಟ್ ತಲುಪಲಿದ್ದು, ಅಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರದ ಪರ ಗೌರವ ಸಲ್ಲಿಸಲಿದ್ದಾರೆ. ನಂತರ ಶ್ರದ್ಧಾಂಜಲಿ ಕಲಶವನ್ನು ಕಾರ್ಗಿಲ್ ಕಾರ್ಗಿಲ್ ಸ್ಮರಣಾರ್ಥ ನಿರ್ಮಿಸಿರುವ ಸ್ಥಳದಲ್ಲಿ ಇಡಲಾಗುವುದು ಎಂದು ಇದರ ಉಸ್ತುವಾರಿ ವಹಿಸಿರುವ ಎಸ್.ಸಿ.ಭಂಡಾರಿ ತಿಳಿಸಿದ್ದಾರೆ.