ಚಿತ್ರದುರ್ಗ: ದಮನಿತ ಮಹಿಳೆಯರು, ತೃತೀಯ ಲಿಂಗಿಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಮೂಲಕ ಜೀವನ ಮಟ್ಟ ಸುಧಾರಣೆಗೆ ನೆರವು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಮನಿತ ಮಹಿಳೆಯರು (ಲೈಂಗಿಕ ಕಾರ್ಯಕರ್ತೆಯರು) ನೆಮ್ಮದಿಯ ಜೀವನ ನಡೆಸಲು ಪ್ರೋತ್ಸಾಹಧನ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲ, ವಸತಿ ಸೌಲಭ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಅಗತ್ಯ ಸವಲತ್ತು ಕಲ್ಪಿಸಲಾಗುವುದು. ಸರ್ಕಾರಿ ಸವಲತ್ತು ಪಡೆದುಕೊಂಡ ಬಳಿಕವೂ ಅದೇ ವೃತ್ತಿಯಲ್ಲಿ ಮುಂದುವರೆದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ. ಅದೇ ರೀತಿ ಸರ್ಕಾರದಿಂದ ವಿವಿಧ ಸೌಲಭ್ಯ ಪಡೆದ ಮಂಗಳಮುಖೀಯರು ಎಲ್ಲೆಂದರಲ್ಲಿ ತಿರುಗಾಟ ನಡೆಸಿ ಭಿಕ್ಷಾಟನೆ ನಡೆಸುವುದು ಸರಿಯಲ್ಲ ಎಂದರು.
ದಮನಿತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಸಹಾಯಧನ ಹಾಗೂ 25 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲಾಗುವುದು. ಅಲ್ಲದೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಸಿದ್ಧವಿದೆ. ಆಸಕ್ತರಿಗೆ ರುಡ್‌ಸೆಟ್ ಸಂಸ್ಥೆಯಿಂದ ವಿವಿಧ ವೃತ್ತಿ ಆಧಾರಿತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1974 ದಮನಿತ ಮಹಿಳೆಯರು ಹಾಗೂ 706 ತೃತೀಯ ಲಿಂಗಿಗಳು ಇರುವುದಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. ದಮನಿತ ಮಹಿಳೆಯರ ಜೀವನಮಟ್ಟ ಸುಧಾರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ದಮನಿತ ಮಹಿಳೆಯರು ತಮ್ಮ ವೃತ್ತಿ ತೊರೆದು ಸಮಾಜಮುಖೀ ವೃತ್ತಿಯಲ್ಲಿ ತೊಡಗಬೇಕು. ಇದಕ್ಕಾಗಿ ಸರ್ಕಾರ ಸೌಖ್ಯ ಸಮುದಾಯ ಸಂಸ್ಥೆಯನ್ನು ನೇಮಿಸಿದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕುವುದಿಲ್ಲ, ಬದಲಾಗಿ ಸಂಸ್ಥೆಗಳು ಇದರ ದುರುಪಯೋಗ ಪಡೆದುಕೊಳ್ಳುತ್ತಿರುವ ಸಾಧ್ಯತೆಯೂ ಇಲ್ಲದಿಲ್ಲ. ಕೇವಲ ಅಂಕಿ-ಸಂಖ್ಯೆ ತೋರಿಸಿ ದಮನಿತರಿಗೆ ಸಿಗುವ ಸೌಲಭ್ಯದಿಂದ ಅರ್ಹರನ್ನು ವಂಚಿಸುವ ಸಾಧ್ಯತೆಗಳೇ ಹೆಚ್ಚಿವೆ. ಲೈಂಗಿಕ ಕಾರ್ಯಕ್ಕೆ ಬಲವಂತವಾಗಿ ತಳ್ಳಲ್ಪಟ್ಟ ಮಹಿಳೆಯರಿಗೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಲಾಗುತ್ತದೆಯೇ ವಿನಃ ಸ್ವಯಂಪ್ರೇರಿತರಾಗಿ ಈ ವೃತ್ತಿಗೆ ಹೋದವರಿಗೆ ಅವಕಾಶ ಕಲ್ಪಿಸಲಾಗದು ಎಂದು ಸ್ಪಷ್ಟಪಡಿಸಿದರು.
ಲೈಂಗಿಕ ಅಲ್ಪಸಂಖ್ಯಾತರು (ತೃತೀಯ ಲಿಂಗಿಗಳು) ಸಮಾಜದಲ್ಲಿ ಎಲ್ಲರಂತೆ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಈಗಾಗಲೇ ಎಲ್ಲ ಬಗೆಯ ಸೌಲಭ್ಯ ಒದಗಿಸುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರರನ್ನು ನೋಂದಾಯಿಸಿಕೊಳ್ಳಲು ಜಿಲ್ಲೆಯಲ್ಲಿ ವಾಹಿನಿ ಸಮುದಾಯ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇವರಿಗೂ ಕೂಡ 25 ಸಾವಿರ ರೂ. ಸಹಾಯಧನ ಹಾಗೂ 25 ಸಾವಿರ ರೂ. ಬಡ್ಡಿ ರಹಿತ ಸಾಲ ಸೌಲಭ್ಯ, ಮನೆ ಕೂಡ ದೊರಕಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಪಂ ಸಿಇಒ ಸತ್ಯಭಾಮ ಮಾತನಾಡಿ, ದಮನಿತ ಮಹಿಳೆಯರ ಸಬಲೀಕರಣಕ್ಕಾಗಿ ನೇಮಕಗೊಂಡಿರುವ ಸ್ವಯಂಸೇವಾ ಸಂಸ್ಥೆಗಳು ಸಾಮಾಜಿಕ ಪಿಡುಗನ್ನು ತೊಡೆದು ಹಾಕುವ ಬದಲಾಗಿ ಸಮಸ್ಯೆಯನ್ನು ಜೀವಂತವಾಗಿರಿಸುತ್ತಿವೆ. ಸರ್ಕಾರದ ಅನುದಾನ ಪಡೆಯುವುದನ್ನು ಮುಂದುವರೆಸುವ ಹುನ್ನಾರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಹಿನಿ ಸಮುದಾಯ ಸಂಸ್ಥೆಯ ಕಾರ್ಯದರ್ಶಿ ಈರಣ್ಣ ಮಾತನಾಡಿ, ತೃತೀಯ ಲಿಂಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಎಷ್ಟೋ ಜನ ಅಪನಿಂದನೆಗೆ ಹೆದರಿ ಧೈರ್ಯ ತೋರ್ಪಡಿಸಲಾಗದೆ ಮನೆಯಲ್ಲಿಯೇ ಉಳಿದು, ಕುಟುಂಬದವರ ಬಲವಂತಕ್ಕೆ ಮದುವೆ ಮಾಡಿಕೊಳ್ಳುತ್ತಾರೆ. ಇದರಿಂದ ಹೆಣ್ಣಿನ ಜೀವನ ಹಾಳು ಮಾಡುವಂತಾಗುತ್ತದೆ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮುಕ್ತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕೆ. ಅರುಣ್, ಕರ್ನಾಟಕ ಆರೋಗ್ಯ ಸಂವರ್ಧನಾ ಟ್ರಸ್ಟ್ ರಾಮಚಂದ್ರಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಸಿಡಿಪಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.