Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ನೆರವು: ಸಚಿವ ಡಾ|ನಾರಾಯಣ ಗೌಡ 

09:59 PM Feb 26, 2021 | Team Udayavani |

ಮಹಾನಗರ: ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ನೆರವು ನೀಡಲು ಕ್ರಮವಹಿಸಲಾಗುವುದು ಎಂದು ರಾಜ್ಯ ಯೋಜನೆ. ಕಾರ್ಯಕ್ರಮ ಸಂಯೋಜನೆ, ಸಾಂಖೀಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ| ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ.

Advertisement

ನ‌ಗರದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಈಗಾಗಲೇ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮನವಿ ಮಾಡಿದ್ದಾರೆ ಎಂದರು.

ಕ್ರೀಡಾಳುಗಳಿಗೆ ಹೆಚ್ಚಿನ ಪೋತ್ಸಾಹ ನೀಡಿ, ಖೇಲ್‌ ಇಂಡಿಯಾ ಯೋಜನೆಯನ್ನು ಸಮರ್ಥ ವಾಗಿ ಅನುಷ್ಠಾನಗೊಳಿಸಿ ಕರ್ನಾಟಕವನ್ನು ಕ್ರೀಡೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಕ್ರೀಡೆಗೆ ಹೆಚ್ಚಿನ ಉತ್ತೇಜನ: ಶಾಸಕ ಕಾಮತ್‌ ಮನವಿ :

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳನ್ನು ನೀಡಿ ಪ್ರೋತ್ಸಾಹಿಸುವಂತೆ ಶಾಸಕ ವೇದವ್ಯಾಸ ಕಾಮತ್‌ ಸಚಿವಗೆ ಮನವಿ ಮಾಡಿದರು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 10 ಕೋ.ರೂ. ವೆಚ್ಚದಲ್ಲಿ ಮಂಗಳಾ ಕ್ರೀಡಾಂಗಣದ ಬಳಿ ಹಾಗೂ ಉರ್ವದಲ್ಲಿ 25 ಕೋ.ರೂ. ರೂ. ವೆಚ್ಚದಲ್ಲಿ ಕ್ರೀಡಾಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಲಾಲ್‌ಬಾಗ್‌ ಬಳಿ ಖೇಲ್‌ ಇಂಡಿಯಾ ಯೋಜನೆಯಲ್ಲಿ 10 ಕೋ.ರೂ. ವೆಚ್ಚದಲ್ಲಿ ವಾಲ್‌ಬಾಲ್‌, ಇತರ ಕ್ರೀಡೆಗಳಿಗೆ ಕ್ರೀಡಾ ಸಂಕೀರ್ಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Advertisement

ಶ‌ಂಕುಸ್ಥಾಪನೆಗೊಂಡ ಯೋಜನೆಗಳು :

ಮಹಾನಗರ ಪಾಲಿಕೆಯ ಬಜಾಲ್‌ ಮಹಾದೇವಿ ಭಜನ ಮಂದಿರ ಬಳಿ ಮುಖ್ಯರಸ್ತೆಗೆ 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಜಪ್ಪಿನಮೊಗರು ಉಳ್ಳಾಲ ಹೊಗೆ ಪ್ರದೇಶಕ್ಕೆ 30 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಬೋಳೂರು ಅಮೃತಾನಂದಮಯಿ ಶಾಲೆಯ ಮುಂದುಗಡೆ ರಸ್ತೆ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಕದ್ರಿಗುಡ್ಡೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣ, ದೇರೆಬೈಲ್‌ ನೈಋತ್ಯ ಹೊಗೆಬೈಲ್‌ 2ನೇ ಅಡ್ಡರಸ್ತೆಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಪಿವಿಎಸ್‌ ಕಲಾಕುಂಜ ಬಳಿ ಕುಸಿದಿರುವ ಚರಂಡಿಗೆ ಲಕ್ಷ ರೂ, ವೆಚ್ಚದಲ್ಲಿ ತಡೆಗೋಡೆ, ಬಿಜೈ ಕೆಎಂಸಿ ಹಾಸ್ಟೇಲ್‌ ಹಿಂಬದಿಯಲ್ಲಿ ಚರಂಡಿಗೆ 10 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಭದ್ರಕಾಳಿ ರಸ್ತೆಗೆ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಬಿಕರ್ನಕಟ್ಟೆ ನಾಗಬ್ರಹ್ಮ ದೇವಸ್ಥಾನ ರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಶಕ್ತಿನಗರ ಪದವು ಕಾರ್ಮಿಕ ಕಾಲನಿ ರಮಾಶಕ್ತಿ ಮಿಶನ್‌ ಬಸ್‌ನಿಲ್ದಾಣದಿಂದ ಮುಂದಿನ ರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಕುದ್ರೋಳಿ ಹಳೇಗೇಟ್‌ ಎದುರುಗಡೆ ಕಂಪು ಕಾಂಪೌಂಡ್‌ ರಾಜಕಾಲುವೆಗೆ 10 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಟೆಲಿಕಾಂ ಕ್ವಾರ್ಟರ್ಸ್‌ ಹಿಂದುಗಡೆ 10 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಬರ್ಕೆ ಮೆಗಲಿನ್‌ ವಿಂಗ್ಸ್‌ ಅಪಾರ್ಟ್‌ಮೆಂಟ್‌ ಬಳಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಸಹಿತ ಕಾಂಕ್ರೀಟ್‌, ಪರಂಜ್ಯೋತಿ ಭಜನ ಮಂದಿರಕ್ಕೆ ಹೋಗುವ ರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌, ಶಾಂತಿಗುರಿಯಲ್ಲಿ ತೋಡಿಗೆ 5 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ, ಕೊಡಕ್ಕಲ್‌ ಶಿವನಗರದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಬದಿಗೋಡೆ ರಚನೆ, ಅತ್ತಾವರ 6ನೇ ಅಡ್ಡರಸ್ತೆಯ 3ನೇ ಒಳರಸ್ತೆಯ ಚರಂಡಿ ಸಹಿತ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರೀಟ್‌, ಅರೆಕೆರೆ ಬೈಲ್‌ ಅಂಬಾಮಹೇಶ್ವರೀ ಭಜನ ಮಂದಿರ ಬಳಿ 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಸಹಿತ ರಸ್ತೆ ಕಾಂಕ್ರೀಟ್‌, 10 ಲಕ್ಷ ರೂ. ವೆಚ್ಚದಲ್ಲಿ ಶೆಟ್ಟಿಬೆಟ್ಟು ಒಳರಸ್ತೆ ಕಾಂಕ್ರೀಟ್‌ ಕಾಮಗಾರಿ, ಬಡಗ ಎಕ್ಕಾರು ಗ್ರಾಮದ ಬಡಕೆರೆ ಜಾರಂದಾಯ ದೈವಸ್ಥಾನದ ಬಳಿ 12 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆ ರಚನೆ.

ಪ್ರಾಧಿಕಾರಕ್ಕೆ 500 ಕೋ.ರೂ.ಗೆ ಮನವಿ  :

ಕರಾವಳಿ ಅಭಿವೃದ್ಧಿ ಪ್ರಾಧಿಕಾರ 3 ಜಿಲ್ಲೆಗಳಲ್ಲಿ ಈಗಾಗಲೇ 35 ಕ್ಕೂ ಅಧಿಕ ಮೀನುಮಾರುಕಟ್ಟೆಗಳನ್ನು ನಿರ್ಮಿಸಿದೆ.120 ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ 240 ಕಾಲುಸಂಕಗಳಿಗೆ ಬೇಡಿಕೆ ಬಂದಿದೆ. ಇದಲ್ಲದೆ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಪಿಂಕ್‌ ಪೆಪ್ಪರ್‌ ಗಿಡಗಳನ್ನು ನೆಡುವ ಯೋಜನೆ ಇದೆ. ಮೂರು ಜಿಲ್ಲೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರಕ್ಕೆ 500 ಕೋ.ರೂ. ನೀಡಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸಚಿವ ಡಾ| ನಾರಾಯಣ ಗೌಡ ಅವರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ನಿಗಮಗಳ ಅಧ್ಯಕ್ಷರಾದ ಮಿಥುನ್‌ ಕುಮಾರ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರು, ಮೇಯರ್‌ ದಿವಾಕರ್‌ ಪಾಂಡೇಶ್ವರ, ಯುವಜನ, ಕ್ರೀಡಾ ಇಲಾಖೆಯ ನಿರ್ದೇಶಕ ಚಂದ್ರಶೇಖರಯ್ಯ ಉಪಸ್ಥಿತರಿ ದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್‌ ಡಿಸೋಜ ಸ್ವಾಗತಿಸಿ, ಪ್ರಭಾಕರ್‌ ವಂದಿಸಿದರು. ಮಂಜುಳಾ ಶೆಟ್ಟಿ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next