Advertisement

ಸ್ಲಂನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಲು ನೆರವು

01:07 AM Sep 26, 2019 | Lakshmi GovindaRaju |

ಬೆಂಗಳೂರು: “ಕೊಳಗೇರಿ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಮುಂದೆಬರುವ ಬಿಲ್ಡರ್‌ಗಳು, ಡೆವಲಪರ್‌ಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆವರಣದಲ್ಲಿ ಬುಧವಾರ ರಾಷ್ಟ್ರೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಪರಿಷತ್ತು, ಕರ್ನಾಟಕ (ಎನ್‌ಆರ್‌ಇಡಿಸಿಒ) ಹಮ್ಮಿಕೊಂಡಿದ್ದ ಕರ್ನಾಟಕ ಬಿಲ್ಡರ್ ಮತ್ತು ಡೆವಲಪರ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ಹಲವು ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯದ ಕೊಳಗೇರಿಗಳಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳಿರುವ ಬಹುಮಹಡಿ ವಸತಿ ಸಮುತ್ಛಯಗಳನ್ನು ನಿರ್ಮಿಸಲು ಮುಂದೆ ಬಂದರೆ, ಅಗತ್ಯವಿರುವ ಹಣ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ಸೂರು ಇಲ್ಲದವರು ಮನೆ ನಿರ್ಮಿಸಿಕೊಳ್ಳಲು ರಾಜ್ಯದಲ್ಲಿ ಈಗಾಗಲೇ ಇಂದಿರಾ ಆವಾಸ್‌, ಬಸವ ವಸತಿ, ಅಂಬೇಡ್ಕರ್‌ ವಸತಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಕೊಳಗೇರಿಗಳ ನೂರಾರು ಕುಟುಂಬಗಳಿಗೆ ಸೂರಿಲ್ಲ. ಇದ್ದರೂ ಸುಸ್ಥಿತಿಯಲ್ಲಿ ಇರುವುದಿಲ್ಲ. ಅಂತಹ ಕಡೆಗಳಲ್ಲಿ ಬಹುಮಹಡಿ ವಸತಿ ಸಮುತ್ಛಯಗಳ ನಿರ್ಮಾಣಕ್ಕೆ ಬಿಲ್ಡರ್‌ಗಳು ಮುಂದೆಬರಬೇಕು. ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆಗೆ ಪೂರಕವಾದ ಯಾವುದೇ ರೀತಿಯ ಸಲಹೆಗಳನ್ನು ಸರ್ಕಾರ ತಕ್ಷಣ ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕಿರುಕುಳ ನೀಡಿದರೆ ಕ್ರಮ: ಭೂಮಿ ಪರಿವರ್ತನೆ, ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನುಮತಿ ನೀಡುವಲ್ಲಿ ಇರುವ ವಿಳಂಬ ಧೋರಣೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಪ್ರೋತ್ಸಾಹಿಸಲಾಗುವುದು. ಅಧಿಕಾರಿಗಳು ಬಿಲ್ಡರ್‌ಗಳಿಗೆ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದರು.

ಎನ್‌ಆರ್‌ಇಡಿಸಿಒ ಅಧ್ಯಕ್ಷ ಡಾ.ನಿರಂಜನ್‌ ಹೀರಾನಂದಾನಿ ಮಾತನಾಡಿ, ನಿರ್ಮಾಣ ಯೋಜನೆಗಳಿಗೆ ಅನುಮೋದನೆ, ಭೂಮಿ ಪರಿವರ್ತನೆಗೆ ಮಂಜೂರಾತಿ ಸೇರಿದಂತೆ ಹಲವು ವಿಭಾಗಗಳಲ್ಲಿ ನೂರಾರು ಪ್ರಕರಣಗಳು ಎರಡು-ಮೂರು ವರ್ಷಗಳಿಂದ ವಿಲೇವಾರಿ ಆಗುತ್ತಿಲ್ಲ. ಈ ವಿಳಂಬ ಧೋರಣೆಯು ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಬೇಸರ ಉಂಟುಮಾಡಿದೆ. ತ್ವರಿತಗತಿಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

Advertisement

ಕೇಂದ್ರ ಸರ್ಕಾರ ಈಗಾಗಲೇ ನಿರ್ಮಾಣ ಯೋಜನೆಗಳಿಗಿದ್ದ ತೆರಿಗೆ, ಕಾರ್ಪೊರೇಟ್‌ ಕಂಪನಿಗಳಿಗೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಸಾಕಷ್ಟು ಕಡಿತಗೊಳಿಸಿದೆ. ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವುದು ಸೇರಿದಂತೆ ಉದ್ಯಮದ ಚೇತರಿಕೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರಗಳು ಕೂಡ ಉತ್ತೇಜನಕಾರಿ ಕ್ರಮ ಕೈಗೊಳ್ಳಬೇಕು.

ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿ ಶುಲ್ಕವನ್ನು ಶೇ.33ರಷ್ಟು ಕಡಿಮೆ ಮಾಡಿದೆ. ನೋಂದಣಿ ಮುದ್ರಾಂಕ ಶುಲ್ಕ ಕಡಿಮೆ ಮಾಡಲು ಚಿಂತನೆ ನಡೆಸಿದೆ. ಕರ್ನಾಟಕವೂ ಈ ದಿಸೆಯಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದರು. ಎನ್‌ಆರ್‌ಇಡಿಸಿಒ ಕರ್ನಾಟಕ ವೃತ್ತದ ಅಧ್ಯಕ್ಷ ಎಂ. ಸತೀಶ್‌ ಕುಮಾರ್‌, ಗೌರವ ಕಾರ್ಯದರ್ಶಿ ಡಾ.ಸುಜಿತ್‌ ಕುಮಾರ್‌, ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next