ಕೋಲಾರ: ತಾಲೂಕಿನ ವೇಮಗಲ್ ಹೋಬಳಿ ಕ್ಯಾಲನೂರು ಗ್ರಾಮದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಗೋಪುರ ನಿರ್ಮಾಣಕ್ಕೆ ಅಗತ್ಯವಾದ ನೆರವನ್ನು ಒದಗಿಸುವುದಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಭರವಸೆ ನೀಡಿದರು.
ಗ್ರಾಮಸ್ಥರ ಮನವಿ ಮೇರೆಗೆ ಆಗಮಿಸಿದ್ದ ಅವರು, ಸುಮಾರು 80 ಲಕ್ಷದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಗೋಪುರ ನಿರ್ಮಾಣ ಕಾರ್ಯಕ್ಕೆ ಅಗತ್ಯ ಆರ್ಥಿಕ ನೆರವು ಒದಗಿಸುವುದಾಗಿ ತಿಳಿಸಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸುತ್ತಿರುವುದಾಗಿ ತಿಳಿಸಿದರು.
ಯಾರಿಗೂ ಅನ್ಯಾಯ ಮಾಡಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಾಲೂಕಿನ ಅಭಿವೃದ್ಧಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ದೇವರು ಆರ್ಥಿಕವಾಗಿ ನನ್ನನ್ನು ಚೆನ್ನಾಗಿ ಇಟ್ಟಿದ್ದಾನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನೀವು ಮತ ನೀಡಿ ಗೆಲ್ಲಿಸಿದರೆ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಸಚಿವರು ಮತ್ತು ಸಿಎಂ ಭರವಸೆ ನೀಡಿದ್ದಾರೆ. ಕಳೆದ 4 ವರ್ಷಗಳಿಂದ ಕನಿಷ್ಟ ಒಂದೇ ಒಂದು ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಮನಗಂಡಿದ್ದೇನೆ. ಮೊದಲು ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ, ಮೊದಲು ಉತ್ತಮ ಶಿಕ್ಷಣ ಇಂದಿನ ಅಗತ್ಯವಾಗಿದೆ. ಅವರಿಗೆ ಅಗತ್ಯ ಉದ್ಯೋಗಗಳನ್ನು ಕೊಡಿಸಲು ವೇಮಗಲ್, ನರಸಾಪುರ ವ್ಯಾಪ್ತಿಯಲ್ಲಿ ಅನೇಕ ಕೈಗಾರಿಕೆಗಳು ತಲೆಯೆತ್ತುತ್ತಿದ್ದು, ಉದ್ಯೋಗ ಸೃಷ್ಟಿಯಾಗುವು ದರಿಂದ ನೀವು ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಚಂದ್ರಮೌಳೇಶ್ವರ ಸ್ವಾಮಿ ಗೋಪುರ ಸಂಪೂರ್ಣ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ನನ್ನದು. ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಹಣ ಕ್ರೋಢೀಕರಿಸೋಣ, ನಿಮಗೆ ಆ ಭಯ ಬೇಡ, ಈ ಕ್ಷೇತ್ರದಲ್ಲಿ ದೇವರ ಭಕ್ತಿ ಹೆಚ್ಚಿನದು, ನಾನು ದೇವರನ್ನು ನಂಬಿದ್ದೇನೆ. ಜತೆಗೆ ಕ್ಷೇತ್ರದ ಮತದಾರರಿಗೆ ಅನ್ಯಾಯವಾಗಲು ಬಿಡುವುದು ಇಲ್ಲ ಎಂದರು.
ಬಿಜೆಪಿ ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಪಂ ಮಾಜಿ ಸದಸ್ಯ ಬಂಕ್ ಮಂಜುನಾಥ್, ತಾಲೂಕು ಅಧ್ಯಕ್ಷರಾದ ಸಿಡಿ ರಾಮಚಂದ್ರಗೌಡ, ಕ್ಯಾಲನೂರು ಗ್ರಾಪಂ ಅಧ್ಯಕ್ಷ ಜಂಶೀರ್ ಪಾಷಾ, ಗ್ರಾಪಂ ಸದಸ್ಯರಾದ ರಾಜೇಂದ್ರ ಪ್ರಸಾದ್, ಗ್ರಾಪಂ ಮಾಜಿ ಸದಸ್ಯರಾದ ಶಂಕರ್, ಮುಖಂಡರಾದ ಬಾಬು ಹಾಗೂ ಕ್ಯಾಲೂನೂರಿನ ಗ್ರಾಮಸ್ಥರು ಉಪಸ್ಥಿತರಿದ್ದರು.