Advertisement

ಗೊಂಬೆ ಮಾರಿದ ಹಣದಿಂದ ಅಶಕ್ತ ಮಗುವಿನ ಚಿಕಿತ್ಸೆಗೆ ನೆರವು

09:58 AM Feb 16, 2020 | sudhir |

ಉಡುಪಿ: ವೇಷಧರಿಸಿ ಆ ಮೂಲಕ ದೇಣಿಗೆ ಸಂಗ್ರಹ ಮಾಡಿ ಸಮಾಜಸೇವೆ ಮಾಡಿರುವ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬರು ಚೆನ್ನಪಟ್ಟಣದ ಗೊಂಬೆಯನ್ನು ಮಾರುವ ಮೂಲಕ ದೇಶೀಯ ಉತ್ಪನ್ನಕ್ಕೆ ಬೆಂಬಲ ನೀಡಿ ಬಂದ ಲಾಭವನ್ನು ಆಶಕ್ತ ಮಗುವಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಅಂಬಲಪಾಡಿ ಅಜಿತ್‌ ಕಪ್ಪೆಟ್ಟು ಕಳೆದ ವರ್ಷದ ಉಡುಪಿ ಉತ್ಸವದಲ್ಲಿ ಚೆನ್ನಪಟ್ಟಣದ ಗೊಂಬೆ ಮಾರಿ ಬಂದ ಲಾಭಾಂಶದ 1 ಲಕ್ಷ ರೂ. ಮೊತ್ತವನ್ನು ಕಳೆದವಾರ ಬುಡೋಕಾನ್‌ ಕರಾಟೆ ವತಿಯಿಂದ ಅಂಬಲಪಾಡಿ ದೇವಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟದ ವೇಳೆ ವೈಷ್ಣವಿ ಎಂಬ ಆಶಕ್ತ ಮಗುವಿಗೆ ನೀಡಿದ್ದಾರೆ.

ಚೆನ್ನಪಟ್ಟಣ ಗೊಂಬೆ
ಸಮಾಜಸೇವೆ ಮಾಡಬೇಕೆಂಬ ತುಡಿತದ ಲ್ಲಿದ್ದಾಗ ಅಜಿತ್‌ ಅವರಿಗೆ ವೈಷ್ಣವಿ ಎಂಬ ಮಗುವಿಗೆ ಕೈಕಾಲು ಸ್ವಾಧೀನ ಕಳೆದು ಚಿಕಿತ್ಸೆಗೆ ಹಣದ ಅಗತ್ಯವಿರುವುದು ಗಮನಕ್ಕೆ ಬರುತ್ತದೆ. ಹೀಗೆ ಈ ಮಗುವಿಗೆ ಸಹಾಯ ಮಾಡಲೆಂದು ನಿರ್ಧರಿಸಿ ಜನರಿಂದ ನೇರ ದೇಣಿಗೆ ಪಡೆಯುವ ಬದಲು ವಸ್ತು ಒಂದನ್ನು ನೀಡುವ ಯೋಚನೆ ವಹಿಸುತ್ತಾರೆ. ಮಾತ್ರವಲ್ಲದೆ ವಸ್ತುವಿನ ಆಯ್ಕೆಯಲ್ಲೂ ಜಾಣ್ಮೆ ತೋರಿದ ಇವರು ಕರ್ನಾಟಕ ಸರಕಾರದಿಂದ ಭೌಗೋಳಿಕ ವಿಶೇಷತೆ ಎಂದು ನೋಂದಾಯಿಸಲ್ಪಟ್ಟ ಚನ್ನಪಟ್ಟಣದ ಗೊಂಬೆ ಮಾರುವ ಮೂಲಕ ವಿಶ್ವ ವಿಖ್ಯಾತ ಗೊಂಬೆ ಕಲೆಯನ್ನು ಉಳಿಸಿದಂತೆ ಮತ್ತು ಆಶಕ್ತ ಮಗುವಿಗೆ ಸಹಾಯ ಮಾಡಿದಂತೆ ಜನರಲ್ಲೂ ತಾನೊಂದು ವಸ್ತು ಖರೀದಿಸಿದ್ದೇನೆಂಬ ಭಾವನೆ ಹೀಗೆ ಮೂರು ಕೋನದಲ್ಲೂ ಸೇವಾ ಮನೋ ಭಾವ ಮೆರೆದಿದ್ದಾರೆ. ತಮ್ಮ ದುಡಿತದ ಬಹುಪಾಲು ಸಮಾಜಸೇವೆಗೆಂದೇ ಮುಡಿಪಾಗಿಟ್ಟಿರುವ ಇವರು ವೃತ್ತಿಯಲ್ಲಿ ಫೊಟೋಗ್ರಾಫ‌ರ್‌ ಆಗಿದ್ದಾರೆ.

ಹಲವು ಸೇವೆ ಕಾರ್ಯ
ಹಲವು ವರ್ಷಗಳಿಂದ ಸೇವಾ ಕಾರ್ಯದಲ್ಲಿ ತೊಡಗಿರುವ ಅಜಿತ್‌ ಅವರು ರಸ್ತೆ ಅಪಘಾತಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ಧನಸಹಾಯ ನೀಡುವ, ಕ್ರಿಕೆಟ್‌ ಟೂರ್ನಮೆಂಟ್‌ ಮೂಲಕ ಕಣ್ಣಿಲ್ಲದ ಮಕ್ಕಳಿಗೆ ಹಣ ಸಂಗ್ರಹಿಸಿ ನೀಡಿರುವುದು, ರಸ್ತೆಯಲ್ಲಿ ತೆರಳುವಾಗ ಹೊಟ್ಟೆ ಹಸಿದವರನ್ನು ಕಂಡು ಊಟ ಕೊಡಿಸಿ ಹೃದಯ ವೈಶಾಲ್ಯ ಮೆರೆದಿದ್ದಾರೆ. ಸದ್ಯ ಮಗುವಿನ ಆರೋಗ್ಯದ ಖರ್ಚಿಗೆ ದೊಡ್ಡ ಮೊತ್ತವನ್ನು ನೀಡಿರುವ ಇವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯದಲ್ಲಿ ತೊಡಗುವ ಯೋಜನೆ ರೂಪಿಸುತ್ತಿದ್ದಾರೆ.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ| ವಿಜಯ ಬಲ್ಲಾಳ್‌ ಸೇರಿದಂತೆ ಅನೇಕ ಗಣ್ಯರಿಂದ ಇವರ ಕಾರ್ಯಕ್ಕೆ ಪ್ರಶಂಸೆ ಸೇರಿದಂತೆ ಪ್ರೋತ್ಸಾಹದ ಭರವಸೆಯು ದೊರಕಿದೆ. ಉಡುಪಿಯ ಅಷ್ಟಮಿ ಸಂದರ್ಭದ ರಾಜ್ಯಮಟ್ಟದ ಫೋಟೋಗ್ರಾಫಿ ಸ್ಪರ್ಧೆಯಲ್ಲಿ 2 ಬಾರಿ ಪ್ರಶಸ್ತಿ ವಿಜೇತರಾಗಿದ್ದಾರೆ.

Advertisement

ಬದಲಾವಣೆ ತರಲು ಸಾಧ್ಯ
ಸಮಾಜದಲ್ಲಿ ಸಣ್ಣ ಸಣ್ಣ ಸೇವೆ ಮಾಡುವ ಮೂಲಕ ಬದಲಾವಣೆ ತರಲು ಸಾಧ್ಯವಿದೆ. ಬಡತನದಿಂದಲೆ ಬಂದಿರುವುದರಿಂದ ಸಮಸ್ಯೆಗಳ ಅರಿವು ಇದೆ. ಹೀಗಾಗಿ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸುವ ಆಲೋಚನೆ ಬಂತು. ಮನೆ, ಸ್ನೇಹಿತರಿಂದಲೂ ಉತ್ತಮ ಬೆಂಬಲ ದೊರೆಯುತ್ತಿದ್ದು. ಮುಂದೆಯೂ ಮಕ್ಕಳಿಗೆ ಕೈಲಾದ ಸಹಾಯ ಮಾಡುವ ಯೋಚನೆ ಇದೆ.
– ಅಜಿತ್‌ ಕಪ್ಪೆಟ್ಟು , ಸಮಾಜ ಸೇವಕ

Advertisement

Udayavani is now on Telegram. Click here to join our channel and stay updated with the latest news.

Next