ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಕಿರಂಗೂರಿನಲ್ಲಿ 40 ಲಕ್ಷ ರೂ ವೆಚ್ಚದ ನೂತನ ಬಿಎಂಸಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಫೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಹುಣಸೂರು ತಾಲೂಕು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದು, ಹೆಚ್ಚು ಬಿಎಂಸಿ ಕೇಂದ್ರಗಳಿರುವುದು ಹೆಮ್ಮೆ, ತಾಲೂಕಿನಲ್ಲಿ ಹಲವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಿಎಂಸಿ ಕೇಂದ್ರ ಕಾಮಗಾರಿಯು ಪ್ರಗತಿಯಲ್ಲಿದೆ. ಕಿರಂಗೂರು ಡೇರಿ ಸ್ಥಾಪನೆಗೊಂಡ ಕೆಲವೇ ವರ್ಷದಲ್ಲಿಯೇ ಡೈರಿ ಹೆಚ್ಚಿನ ಪ್ರಗತಿ ಹೊಂದಿದ್ದು, ಎಂಟು ಲಕ್ಷ ಉಳಿತಾಯ ಮಾಡಿ ಸ್ವಂತ ಕಟ್ಟಡಕ್ಕೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸ ತಂದಿದೆ. ಹೈನುಗಾರರಿಗೆ ಉತ್ತೇಜನ ನೀಡಲು ಮೈಮುಲ್, ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ನೆರವಿನಿಂದ ಹಾಲಿ ಬಿಎಂಸಿ ಕೇಂದ್ರ ನಿರ್ಮಾಣವಾಗುತ್ತಿದೆ. ಇನ್ನೂ 8 ಕೇಂದ್ರಗಳಿಗೆ ನ್ಯಾಷನಲ್ ಕಾರ್ಪೋರೇಷನ್ ನೆರವು ನೀಡಲಿದ್ದು, ಇನ್ನೂ ಹಲವೆಡೆ ಬಿಎಂಸಿ ಕೆಂದ್ರಗಳನ್ನು ಆರಂಭಿಸಲಾಗುವುದೆಂದರು.
ಮಹಿಳಾ ಸ್ವಸಹಾಯ ಸಂಘಗಳವರು ಎಂಡಿಸಿಸಿ ಬ್ಯಾಂಕ್ ಮೂಲಕವೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು, ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮೈಮುಲ್ ನಿರ್ದೇಶಕಿ ಶಿವಗಾಮಿ ಈ ಬಿಎಂಸಿ ಕೇಂದ್ರದ ಕಟ್ಟಡವನ್ನು ಹತ್ತು ಲಕ್ಷರೂ ವೆಚ್ಚದಡಿ ನಿರ್ಮಿಸಲಾಗುವುದು. ೩೦ಲಕ್ಷರೂ ವೆಚ್ಚದಡಿ ಯಂತ್ರೋಪಕರಣವನ್ನು ಒದಗಿಸಲಾಗುವುದೆಂದರು. ಉಪವ್ಯವಸ್ಥಪಕ ಸಣ್ಣತಮ್ಮೇಗೌಡ ಮಾತನಾಡಿದರು.
ಡೈರಿ ಅಧ್ಯಕ್ಷ ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾ.ಪಂ.ಮಾಜಿ ಸದಸ್ಯ ಹನಗೋಡುರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸವರಾಜ್, ಸುಭಾಷ್,ಯ. ರಮೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಅನುಸೂಯ, ಸದಸ್ಯೆ ನಂದಿನಿ, ಮೈಮುಲ್ ಅಧಿಕಾರಿ ಕರಿಬಸವಯ್ಯ, ವಿಸ್ತರಣಾಧಿಕಾರಿಗಳಾದ ಗೌತಮ್, ಸಂತೋಷ್, ಡೈರಿ ಕಾರ್ಯದರ್ಶಿ ಶಿವು, ನಿರ್ದೇಶಕರು, ಉತ್ಪಾದಕರು, ಗ್ರಾಮಸ್ಥರು ಭಾಗವಹಿಸಿದ್ದರು.