ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಸಂದರ್ಭ ಸೃಷ್ಟಿಸುವ ಅಪಾಯ ಸಾವು-ನೋವು, ನಷ್ಟ-ಕಷ್ಟ ಅಂದಾಜಿಗೆ ಸಿಗದಷ್ಟು ವಿಸ್ತಾರವಾದದು. ಜಾತಿ, ಮತ, ಧರ್ಮ ಮೀರಿ ಕಷ್ಟ ನಷ್ಟಕ್ಕೆ ಪರಸ್ಪರ ಹೆಗಲು ಕೊಟ್ಟು ಮತ್ತೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಸಂದರ್ಭ ಇದ್ದೆ ಇದೆ.
ದೇಶದಲ್ಲಿ ಯುವ ಜನತೆಯ ಪಾಲು ದೊಡ್ಡದು. ಹಾಗಾಗಿ ದೇಶವನ್ನು ಬಲಿಷ್ಠವನ್ನಾಗಿಸುವ ಎಲ್ಲ ಅವಕಾಶಗಳಿಗೆ ಯುವ ಸಮುದಾಯವೇ ರಾಯಭಾರಿ. ಅದು ಕಷ್ಟದ ಸಂದರ್ಭದಲ್ಲೂ ಹೌದು.
ಪ್ರಸ್ತುತ ಕಾಲಘಟ್ಟವನ್ನು ಗಮನಿಸಿದಾಗ ಪ್ರಕೃತಿಯ ವಿಕೋಪಗಳು ಮಾನವನ ಆವಾಸ, ಕೃಷಿ ವ್ಯವಸ್ಥೆಯನ್ನು ಪಲ್ಲಟಗೊಳಿಸಿದೆ. ವರ್ಷದಿಂದ ವರ್ಷಕ್ಕೆ ಉಂಟಾಗುವ ಅಪಾಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈ ಸಂದರ್ಭ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಹಸ್ತ ಬೇಕು. ಅದು ಫಲಾಪೇಕ್ಷೆ ಬಯಸದ ಸೇವೆ. ಇದಕ್ಕಾಗಿ ಯುವ ಜನತೆ ಈ ನಿಟ್ಟಿನಲ್ಲಿ ತೊಡಗಿಕೊಳ್ಳಬೇಕಾದ ಪಾಲು ಗರಿಷ್ಟವಾದದು. ಜತೆಗೆ ಇದರಿಂದ ಪ್ರಕಟವಾಗುವ ಫಲಿತಾಂಶವೂ ಗರಿಷ್ಠ.
ಊರಿನ ಸುತ್ತಮುತ್ತ ಪ್ರಕೃತಿ ವಿಕೋಪದಂತಹ ಸಮಸ್ಯೆಗಳಾಯಿತು ಎಂದಾಗ ಯುವ ಸಮುದಾಯ ಒಗ್ಗಟ್ಟಾಗಿ ನೆರವಿಗೆ ಧಾವಿಸಬೇಕು. ಈ ಒಗ್ಗಟ್ಟಿನಿಂದ ಸಮಾಜದ ಸಮಸ್ಯೆಗಳನ್ನು ಬಹುಬೇಗನೆ ಪರಿಹಾರ ಕಂಡುಕೊಳ್ಳಬಹುದು. ಯುವ ಜನಾಂಗವೇ ಭಾರತದ ಶಕ್ತಿಯಾಗಿರುವಾಗ ಪ್ರಕೃತಿ ವಿಕೋಪದಂತಹ ಸಮಸ್ಯೆಗಳಿಗೆ ಯುವಜನತೆ ಹೆಗಲಾಗಿ ಸಮಾಜದ ಕುಂದುಕೊರತೆಗೆ ಸ್ಪಂದಿಸಬೇಕು. ಈ ಸೇವಾ ಮನೋಭಾವವನ್ನು ಯುವ ಜನತೆ ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳಬೇಕು.
ಕಷ್ಟವೇನಲ್ಲ
ಸೇವೆಗೆ ಈಗ ಅವಕಾಶಗಳ ಕೊರತೆ ಇಲ್ಲ. ಸಂಘಟಿತವಾಗಿ ಸ್ಪಂದಿಸಲು ಬೇಕಾದ ಹಲವು ದಾರಿಗಳಿವೆ. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಸಂಸ್ಥೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹೀಗೆ ಹತ್ತಾರು ಸಂಘಟನೆಗಳಿವೆ. ಇವೆಲ್ಲವೂ ಪ್ರಾಕೃತಿಕ ವಿಕೋಪ ಸೇರಿದಂತೆ ತುರ್ತು ಸಂದರ್ಭ ಸ್ಪಂದಿಸುತ್ತವೆ. ವಿದ್ಯಾರ್ಥಿ ಜೀವನದ ದಾಟಿದ ಅನಂತರ ಜೇಸಿಐ, ರೋಟರಿ, ಲಯನ್ಸ್, ಗೃಹರಕ್ಷಕ ದಳ ಸೇರಿದಂತೆ ಹಲವು ಸಂಘಟನೆಗಳ ಮೂಲಕ ಸೇವಾ ಕ್ಷೇತ್ರಕ್ಕೆ ಧುಮುಕಬಹುದು.
ಯುವ ಸಮುದಾಯ ಮನಸ್ಸು ಮಾಡಿದರೆ ಅಸಾಧ್ಯ ಎನ್ನುವ ಕಾರ್ಯವೇ ಇಲ್ಲ. ಅಖಾಡಕ್ಕೆ ಇಳಿಯಲು ಪ್ರೇರಣೆ ನೀಡುವ ಮಂದಿ ಇದ್ದರೆ ಯುವ ಸಮುದಾಯವನ್ನು ಯಾವುದೇ ಕಾರ್ಯಕ್ಕೆ ಸಿದ್ದಗೊಳಿಸಬಹುದು.
- ಕಿರಣ್ ಕುಂಡಡ್ಕ