Advertisement

50%ರಷ್ಟು ನೆರವು ನೀಡಿ; ಕೇಂದ್ರಕ್ಕೆ ಸಿಎಂ ಮನವಿ

06:00 AM Jun 18, 2018 | |

ಬೆಂಗಳೂರು: ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ತೊಂದರೆಗೊಳಗಾಗಿರುವ ರೈತರ ಸಾಲ ಮನ್ನಾ ಮಾಡಬೇಕಾದ ಅನಿವಾರ್ಯತೆಯನ್ನು ಪ್ರಸ್ತಾಪಿಸಲು ನೀತಿ ಆಯೋಗದ ಸಭೆಯನ್ನು ವೇದಿಕೆಯಾಗಿ ಮಾಡಿಕೊಂಡ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಾಲ ಮನ್ನಾ ಮಾಡುವ ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಶೇ. 50ರಷ್ಟು ನೆರವು ನೀಡಬೇಕು ಎಂದು ಕೋರಿದ್ದಾರೆ.

Advertisement

ದೆಹಲಿಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ರಾಜ್ಯದ ಪರವಾಗಿ ಪಾಲ್ಗೊಂಡು ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಷ್ಟ್ರವು ಎದುರಿಸುತ್ತಿರುವ ಕೃಷಿ ಬಿಕ್ಕಟ್ಟಿನ ಕುರಿತು ಸರ್ಕಾರಗಳು ಗಮನ ಕೇಂದ್ರೀಕರಿಸಬೇಕು. ಆ ನಿಟ್ಟಿನಲ್ಲಿ ಸಾಲದ ಸುಳಿಗೆ ಸಿಲುಕಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಾಗಿದ್ದು, ಈ ಕೆಲಸಕ್ಕೆ ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು ಎಂದರು.

ಕರ್ನಾಟಕದಲ್ಲಿ ಸುಮಾರು 85 ಲಕ್ಷ ರೈತರು ಕೃಷಿ ಉದ್ದೇಶಕ್ಕಾಗಿ ಮಾಡಿರುವ ಸಾಲವನ್ನು ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಾಧ್ಯವಾಗದೆ ಬಾಕಿ ಉಳಿಸಿಕೊಂಡಿದ್ದಾರೆ. ಸತತ ಬರಗಾಲದಿಂದ ರೈತ ಸಮಸ್ಯೆಗಳು ಹೆಚ್ಚಿದ್ದು, ಈ ಕಾರಣದಿಂದ ಸಾಲ ಮನ್ನಾ ಮೂಲಕ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಕೇಂದ್ರದ ನೆರವು ಬೇಕು ಎಂದು ಮನವಿ ಮಾಡಿದರು.

ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ಸುಧಾರಣೆ ತರಲು ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಅಲ್ಲದೆ, ಸಾಕಷ್ಟು ಸುಧಾರಣೆಗಳಿಗೆ ಕಾರಣವಾದ 2013ರ ಕೃಷಿ ಮಾರುಕಟ್ಟೆ ನೀತಿಯನ್ನು ಕೇಂದ್ರ ಸರ್ಕಾರವೂ ಅಧ್ಯಯನ ಮಾಡಿದ್ದು, ಕೇಂದ್ರದ ಇ-ನಾಮ್‌ ಯೋಜನೆಯಡಿ ಸೇರಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ, ರಾಜ್ಯದ ಏಕೀಕೃತ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗುವಂತೆ ಮಾಡಿದೆ ಎಂದು ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ. ಅಲ್ಲದೆ, ಮಣ್ಣಿನ ಮಾದರಿ ಸಂಗ್ರಹಿಸಲು ರೂಪಿಸಿರುವ ಆ್ಯಂಡ್ರಾಯ್ಡ ಅಪ್ಲಿಕೇಷನ್‌, ಮಣ್ಣಿನ ಆರೋಗ್ಯ ಕಾರ್ಡ್‌, ಭೂದಾಖಲೆಗಳಿಗೆ ಸಂಬಂಧಿಸಿದ ಭೂಮಿ ಯೋಜನೆಗಳ ಮೂಲಕ ಬಹುಸಂಖ್ಯಾತ ರೈತರ ಅನುಕೂಲಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೌಶಲ್ಯ ನೀತಿಗೆ ಒತ್ತು ನೀಡಿ
ಉದ್ಯೋಗ ಸೃಜನೆ ಮತ್ತು ಕೌಶಲ್ಯ ತರಬೇತಿ ವಿಚಾಗಳನ್ನು ನೀತಿ ಆಯೋಗದ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಹೂಡಿಕೆಗಳನ್ನು ಆಕರ್ಷಿಸುವುದು ಎಷ್ಟು ಮುಖ್ಯವೋ, ಕೌಶಲ್ಯಾಭಿವೃದ್ಧಿ ಕೂಡ ಅಷ್ಟೇ ಅಗತ್ಯವಿದೆ. ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಸಾಕಷ್ಟು ಒತ್ತು ನೀಡಿದ್ದು, ಇದನ್ನು ದ್ವಿಗುಣಗೊಳಿಸುವ ಅಗತ್ಯವಿದೆ ಎಂದಿದ್ದಾರೆ.

Advertisement

ವಿಕೋಪ ಪರಿಹಾರ ಹೆಚ್ಚಿಸಿ
ವಿಪತ್ತು ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ಬಂದಿರುವುದನ್ನು ನೀತಿ ಆಯೋಗದ ಸಭೆಯಲ್ಲಿ ಪ್ರಸ್ತಾಪಿಸಿದ ಕುಮಾರಸ್ವಾಮಿ, ರಾಜ್ಯ ಕಳೆದ ಹಲವು ವರ್ಷಗಳಿಂದ ಪ್ರಕೃತಿ ವಿಕೋಪ ಸಮಸ್ಯೆಗಳಿಂದ ಬಳಲುತ್ತಿದೆ. ಇದರಿಂದ ರಾಜ್ಯ ಸರ್ಕಾರ ಪ್ರತಿ ವರ್ಷ ಹೆಚ್ಚುವರಿ ಮೊತ್ತವನ್ನು ವಿಕೋಪ ಪರಿಹಾರಕ್ಕೆ ಬಳಸಬೇಕಿದ್ದು, ಇದು ರಾಜ್ಯ ವಿಕೋಪ ಪರಿಹಾರ ನಿಧಿಗೆ ಕೇಂದ್ರ ನೀಡುವ ಅನುದಾನಕ್ಕಿಂತ ಆರು ಪಟ್ಟು ಹೆಚ್ಚಾಗಿದೆ. 2015-20ರ ಅವಧಿಗೆ ವಿಕೋಪ ಪರಿಹಾರ ನಿಧಿಯಡಿ ರಾಜ್ಯಕ್ಕೆ 1,375 ಕೋಟಿ ರೂ. ಮಾತ್ರ ಹಂಚಿಕೆಯಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಆದ್ದರಿಂದ ಈ ಮೊತ್ತ ಹೆಚ್ಚಿಸಬೇಕಿದೆ ಎಂದಿದ್ದಾರೆ.

ಸಭೆಯಲ್ಲಿ ಮಾತನಾಡಲು ಸಿಕ್ಕಿದ ಏಳು ನಿಮಿಷದಲ್ಲಿ ರೈತರ ಸಾಲ ಮನ್ನಾಕ್ಕೆ ನೆರವು ಕೋರಿದ್ದೇನೆ. ಆರೋಗ್ಯ, ಕೌಶಲ್ಯಾಭಿವೃದ್ಧಿ, 2ನೇ ಹಂತಗಳ ನಗರಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ರಾಜ್ಯದ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೇನೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ನೀತಿ ಆಯೋಗದ ಮುಖ್ಯಾಂಶಗಳು
– ಭಾರತದ ಆರ್ಥಿಕತೆಯನ್ನು ಡಬಲ್‌ ಡಿಜಿಟ್‌ಗೆ ಏರಿಕೆ ಮಾಡುವುದು
– 5 ಲಕ್ಷ ಕೋಟಿ ಡಾಲರ್‌ಗೆ ಭಾರತ ಆರ್ಥಿಕತೆಯನ್ನು ತಲುಪಿಸುವುದು
– 23 ಮುಖ್ಯಮಂತ್ರಿಗಳಿಂದ ಸಭೆಯಲ್ಲಿ ಭಾಗಿ, ಒಡಿಶಾ, ಕಾಶ್ಮೀರ, ದೆಹಲಿ ಸಿಎಂ ಗೈರು
– ಪ್ರವಾಹ ಪೀಡಿತ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ ಪ್ರಧಾನಿ
– 15ನೇ ಹಣಕಾಸು ಆಯೋಗದ ವರದಿಗಾಗಿ ಸಲಹೆ ಸೂಚನೆ ನೀಡುವಂತೆ ರಾಜ್ಯಗಳಿಗೆ ಸಲಹೆ
– ರೈತರ ಆದಾಯ ದ್ವಿಗುಣ, ಆಯುಷ್ಮಾನ್‌ ಭಾರತ್‌, ಮಿಷನ್‌ ಇಂದ್ರಧನುಷ್‌, ಪೌಷ್ಟಿಕಾಂಶ ಮಿಷನ್‌ ಮತ್ತು ಮಹಾತ್ಮಾ ಗಾಂಧಿಯವರ 150ನೇ ಹುಟ್ಟುಹಬ್ಬ ವರ್ಷಾಚರಣೆ ಬಗ್ಗೆ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next