Advertisement

ಅಪಘಾತ ನಡೆದ ಸ್ಥಳಕ್ಕೆ ಶೀಘ್ರ ತಲುಪಲುಹೆಚ್ಚಿನ ಆ್ಯಂಬುಲೆನ್ಸ್‌ ನಿಯೋಜಿ

10:43 AM Mar 16, 2019 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿದ್ದು, ರಸ್ತೆ ಅಪಘಾತ ಸಂಭವಿಸಿದಾಗ ಕನಿಷ್ಠ ಸಮಯದೊಳಗೆ ಅಪಘಾತ ಸ್ಥಳಕ್ಕೆ ತಲುಪಲು ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಅಪಘಾತ ಸಂಭವಿಸಿದಾಗ ತಾವು ಹೋಗುವುದರ ಜತೆಗೆ ಹೆಚ್ಚಿನ ಆ್ಯಂಬುಲೆನ್ಸ್‌ಗಳಿಗೆ ಕೊಡೊಯ್ಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು. 

ರಾಷ್ಟ್ರೀಯ ಹೆದ್ದಾರಿ-4, ಎನ್‌.ಎಚ್‌. 13 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ನಿತ್ಯ, ಒಂದಲ್ಲ ಒಂದು ಕಡೆ ಅಪಘಾತ ಸಂಭವಿಸಿ, ಪ್ರಾಣ ಹಾನಿಯಾಗುತ್ತಿದೆ. ಅಪಘಾತ ಸಂಭವಿಸಿದಾಗ ಸಾರ್ವಜನಿಕರು ಯಾರಿಗೆ ತಕ್ಷಣ ಸಂಪರ್ಕಿಸಬೇಕು ಎಂಬ ಬಗ್ಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ಫಲಕಗಳನ್ನು ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಕೆಲವೇ ಕೆಲವು ಪೆಟ್ರೋಲಿಂಗ್‌ ವಾಹನಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಟೋಲ್‌ ಪ್ಲಾಜಾಗಳ ಬಳಿ ಮಾತ್ರ ಆ್ಯಂಬುಲೆನ್ಸ್‌ ಇದ್ದು, ಇದರಿಂದ ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳಲು ಗಂಟೆಗಟ್ಟಲೆ ಸಮಯ ತಲುಪುತ್ತದೆ. ಅಪಘಾತ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ಆದಷ್ಟು ಕಡಿಮೆ ಸಮಯದೊಳಗೆ ಸ್ಥಳಕ್ಕೆ
ತಲುಪುವುದು ಅಪೇಕ್ಷಣೀಯ. ಅಪಘಾತಕ್ಕೆ ಅನುಕಂಪ ತೋರಿಸುವುದು ಮುಖ್ಯವಲ್ಲ. ತಕ್ಷಣದ ನೆರವು ನೀಡುವುದು ಮಾತ್ರ ಮುಖ್ಯವಾಗುತ್ತದೆ ಎಂದರು.
 
 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೇವಲ 2 ಆ್ಯಂಬುಲೆನ್ಸ್‌ ಮಾತ್ರ ಇದ್ದು, ಇದರಿಂದ, ಯಾವುದೇ ಪ್ರಯೋಜನವಿಲ್ಲ ಹಾಗೂ ಪ್ರಾಣ ರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ಎನ್‌ ಎಚ್‌ಗಳಲ್ಲಿ ಆ್ಯಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಿ, ಇವುಗಳನ್ನು ನಿಗದಿತ ಸ್ಥಳದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ಪೆಟ್ರೋಲಿಂಗ್‌ ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ಎನ್‌.ಎಚ್‌. ರಸ್ತೆಗಳಲ್ಲಿ ಸರ್ವಿàಸ್‌ ರಸ್ತೆ ಮೂಲಕ ಮುಖ್ಯ ರಸ್ತೆಗೆ ಕೂಡುವ ಮಾರ್ಗದಲ್ಲಿ ಸೂಕ್ತ ಸಂಪರ್ಕ ವ್ಯವಸ್ಥೆ ಒದಗಿಸಿಲ್ಲ. ಇಂತಹ ಕಡೆಗಳಲ್ಲಿ ವೈಜ್ಞಾನಿಕವಾಗಿ ಸರ್ವೀಸ್‌ ರಸ್ತೆಯಿಂದ ಪ್ರಮುಖ ರಸ್ತೆಗೆ ಸೇರುವಂತೆ ವಿನ್ಯಾಸ ಬದಲಾವಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಂಜುನಾಥ್‌ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ನೆರವಿಗೆ 1033 ಸಹಾಯವಾಣಿ ಲಭ್ಯವಿದೆ. ಅಪಘಾತ ಅಥವಾ  ಯಾವುದೇ ತುರ್ತು ಸಂದರ್ಭವಿದ್ದಲ್ಲಿ, ಸಾರ್ವಜನಿಕರು 1033ಕ್ಕೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ ಎಂದರು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 5 ಕಿ.ಮೀ.ಗೆ ಒಂದರಂತೆ ಸಹಾಯವಾಣಿ ಸಂಖ್ಯೆ, ಸಮೀಪದ ಅಗ್ನಿಶಾಮಕ ಠಾಣೆ ದೂರವಾಣಿ ಸಂಖ್ಯೆ ಹಾಗೂ ಪೊಲೀಸ್‌ ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆಯನ್ನೊಳಗೊಂಡ ಫಲಕ ಹಾಗೂ ವೇಗಮಿತಿ ಎಷ್ಟು ಎಂಬುದರ ಫಲಕಗಳನ್ನು ಅಳವಡಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆ ಮಾಡಬೇಕು ಎಂದು ತಾಕೀತು ಮಾಡಿದರು.
 
ಜಿಲ್ಲಾ ಮಟ್ಟದ ರಸ್ತೆಗಳಲ್ಲಿ ಸಾರ್ವಜನಿಕರೇ ರಸ್ತೆ ತಡೆಗಳನ್ನು ಅವೈಜ್ಞಾನಿಕವಾಗಿ ಹಾಕಿದ್ದಾರೆ. ಇರುವಂತಹ ರೋಡ್‌ ಬ್ರೇಕರ್‌ಗಳಿಗೆ ನಿಯಮಾನುಸಾರ ಬಿಳಿ ಬಣ್ಣ ಹಾಕಿ, ಎಚ್ಚರಿಕಾ ಫಲಕ ಅಳವಡಿಸಬೇಕು. ಆದರೆ ಅವೈಜ್ಞಾನಿವಾಗಿ ನಿರ್ಮಿಸಿರುವ ರೋಡ್‌ ಬ್ರೇಕರ್ಸ್‌ಗಳಿಂದಾಗಿ ಜಿಲ್ಲೆಯಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ. ಪೊಲೀಸ್‌ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸಮೀಕ್ಷೆ ಕೈಗೊಂಡು ಎನ್‌.ಎಚ್‌ ರಸ್ತೆಗಳು ಹಾಗೂ ಜಿಲ್ಲಾ ಮಟ್ಟದ ರಸ್ತೆಗಳಲ್ಲಿ ಅನಗತ್ಯವಾಗಿ ಹಾಕಿರುವ ರೋಡ್‌ ಬ್ರೇಕರ್ಸ್‌ಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಎನ್‌.ಎಚ್‌, ಜಿಲ್ಲಾ ಹಾಗೂ ವಿವಿಧ ರಸ್ತೆಗಳಲ್ಲಿ ಹಿಂದಿನ ಅಪಘಾತಗಳ ಸಂಖ್ಯೆಗಳ ಆಧಾರದಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಅವುಗಳನ್ನು ಕಪ್ಪುಚುಕ್ಕಿ ವಲಯ ಎಂದು ಪರಿಗಣಿಸಬೇಕು. ಈ ಸ್ಥಳಗಳ ರಸ್ತೆ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಗುರುತಿಸಿ, ಅದನ್ನು ನಿವಾರಿಸಲು ಕ್ರಮ ವಹಿಸಬೇಕು. ಈ ಸ್ಥಳಗಳ ಸಮೀಪದಲ್ಲಿ ಅಪಘಾತ ವಲಯ ಎಂಬುದಾಗಿ ದಪ್ಪ ಅಕ್ಷರಗಳಲ್ಲಿ ನಮೂದಿಸಿ, ಎಚ್ಚರಿಕಾ ಫಲಕ ಅಳವಡಿಸಬೇಕು ಎಂದು ಸೂಚನೆ ನೀಡಿದರು. 

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ್‌ ಮಾತನಾಡಿ, ಶಾಲಾ ವಾಹನಗಳು ಮತ್ತು ಆಟೋ ರಿಕ್ಷಾಗಳಲ್ಲಿ ಆಸನಮಿತಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಕೊಂಡೊಯ್ಯದಂತೆ ಪ್ರವರ್ತನ ಕಾರ್ಯ ಕೈಗೊಳ್ಳಲಾಗುವುದು. ಅಪಘಾತ ಸಂಖ್ಯೆಯಲ್ಲಿ ರಾಜ್ಯ ಮಟ್ಟದಲ್ಲಿ ಚಿತ್ರದುರ್ಗ ಜಿಲ್ಲೆ 9 ನೇ ಸ್ಥಾನದಲ್ಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಂಜುನಾಥ್‌, ಡಿವೈಎಸ್‌ಪಿ ವಿಜಯಕುಮಾರ್‌ ಸಂತೋಷ್‌, ಡಿಎಚ್‌ಒ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಜಯಪ್ರಕಾಶ್‌, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next