Advertisement

ಬ್ಯಾಂಕ್‌ಗಳಿಗೆ ವಂಚನೆ ಉತ್ತರದಾಯಿತ್ವ ನಿಗದಿಗೊಳಿಸಿ

06:00 AM May 04, 2018 | |

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಕಳವಳಕ್ಕೆ ಕಾರಣವಾಗಿವೆ. ಐದು ವರ್ಷಗಳಲ್ಲಿ 1 ಲಕ್ಷ ಕೋ. ರೂ.ಗೂ ಅಧಿಕ ಮೊತ್ತದ ವಂಚನೆ ನಡೆದಿದೆ ಎಂದು ಸ್ವತಹ ಆರ್‌ಬಿಐ ಮಾಹಿತಿ ಬಹಿರಂಗಪಡಿಸಿದೆ. ವರ್ಷದಿಂದ ವರ್ಷಕ್ಕೆ ವಂಚನೆ ಮೊತ್ತ ಹೆಚ್ಚುತ್ತಾ ಹೋಗುತ್ತಿರುವುದು ಆರ್‌ಬಿಐ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. 2017-18ನೇ ಸಾಲಿನಲ್ಲಿ ಅತ್ಯಧಿಕ ವಂಚನೆ ನಡೆದಿದೆ. ಎಸ್‌ಬಿಐ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಐಡಿಬಿಐ, ಬ್ಯಾಂಕ್‌ ಆಫ್ ಇಂಡಿಯಾ ಸೇರಿದಂತೆ ಹಲವು ಅಗ್ರಗಣ್ಯ ಬ್ಯಾಂಕುಗಳಲ್ಲೇ ಕೋಟಿಗಟ್ಟಲೆ ರೂಪಾಯಿಯ ವಂಚನೆ ಸಂಭವಿಸಿದೆ. ಬ್ಯಾಂಕ್‌ಗಳಲ್ಲಾಗಿರುವ ವಂಚನೆ ಪ್ರಕರಣಗಳಿಗೂ ಬ್ಯಾಂಕ್‌ಗಳ ಮರುಪಾವತಿಯಾಗದ ಸಾಲದ ಮೊತ್ತ ಅಥವಾ ಎನ್‌ಪಿಎಗೆ ನೇರ ಸಂಬಂಧವಿದೆ. ವಂಚನೆ ಹೆಚ್ಚಿದಂತೆ ಎನ್‌ಪಿಎ ಹೊರೆಯೂ ಹೆಚ್ಚುತ್ತಾ ಹೋಗುತ್ತದೆ. 

Advertisement

ಬ್ಯಾಂಕುಗಳಿಗೆ ವಂಚಿಸಿ ವಿದೇಶಗಳಿಗೆ ಪಲಾಯನ ಮಾಡಿ ಸುಖ ಜೀವನ ನಡೆಸುವುದು ಈಗ ಉದ್ಯಮಿಗಳ ಹೊಸ ತಂತ್ರವಾಗಿದೆ. 9,000 ಕೋ. ರೂ. ವಂಚಿಸಿದ ವಿಜಯ್‌ ಮಲ್ಯ, 13,000 ಕೋ. ರೂ. ವಂಚಿಸಿದ ನೀರವ್‌ ಮೋದಿ ಇವರನ್ನು ವಾಪಸು ಕರೆತಂದು ನ್ಯಾಯಾಲಯದ ಕಟೆಕಟೆಯಲ್ಲಿ ನಿಲ್ಲಿಸಲು ಸರಕಾರ ಹರ ಸಾಹಸಪಡುತ್ತಿದೆ.   ರೈತನೋ, ಸಣ್ಣ ವ್ಯಾಪಾರಿಯೋ ಕೆಲವೇ ಸಾವಿರ ಸಾಲ ಬಾಕಿಯಿಟ್ಟರೆ ಬೆನ್ನುಬಿಡದೆ ಕಾಡಿ ವಸೂಲು ಮಾಡುವ ಬ್ಯಾಂಕುಗಳಿಗೆ ಈ ಸಿರಿವಂತ ಬಂಡವಾಳಶಾಹಿಗಳು ಇಷ್ಟು ಸುಲಭವಾಗಿ ಹೇಗೆ ಮೋಸ ಮಾಡುತ್ತಾರೆ? ಪ್ರತಿ ವಂಚನೆಯಲ್ಲೂ ಬ್ಯಾಂಕಿನ ಅಧಿಕಾರಿಗಳ ನೆರಳು ಕಾಣಿಸುತ್ತಿರುವುದು ಬ್ಯಾಂಕುಗಳ ಆಂತರಿಕ ನಿಯಂತ್ರಣ ವ್ಯವಸ್ಥೆ ದುರ್ಬಲಗೊಂಡಿರುವುದನ್ನು ಸೂಚಿಸುತ್ತದೆ. ಕೆಲವೇ ಅಪ್ರಾಮಾಣಿಕ ಅಧಿಕಾರಿಗಳಿಂದಾಗಿ ಲಕ್ಷಾಂತರ ಸಿಬಂದಿ ಬಾಹುಳ್ಯವುಳ್ಳ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಅಪನಂಬಿಕೆಯಿಂದ ನೋಡುವಂತಾಗಿದೆ. ಹೀಗಾಗದಂತೆ ಮಾಡಲು ತ್ವರಿತವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಹೊಣೆಗಾರಿಕೆ ಆರ್‌ಬಿಐ ಮತ್ತು ಸರಕಾರದ ಮೇಲಿದೆ. 

ಒಂದೆಡೆ ಬ್ಯಾಂಕ್‌ಗಳಿಗೆ ಬಂಡವಾಳಶಾಹಿಗಳು ವಂಚಿಸುತ್ತಾ ಇದ್ದರೆ ಇನ್ನೊಂದೆಡೆಯಿಂದ ಸರಕಾರ ಬ್ಯಾಂಕ್‌ಗಳನ್ನು ಎನ್‌ಪಿಎ ಹೊರೆಯಿಂದ ಪಾರು ಮಾಡುವ ಉದ್ದೇಶದಿಂದ ಬಂಡವಾಳ ಮರುಪೂರಣ ಮಾಡಲು ಮುಂದಾಗಿದೆ. ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲೆಲ್ಲ ಸರಕಾರ ಈ ರೀತಿ ಹಣಕಾಸಿನ ನೆರವು ಒದಗಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ ಹೀಗೆ ಬ್ಯಾಂಕ್‌ ಸೇರುತ್ತಿರುವುದು ಮಾತ್ರ ಜನರ ತೆರಿಗೆ ಹಣ. ಅರ್ಥಾತ್‌ ಉದ್ಯಮಿಗಳು ಪರೋಕ್ಷವಾಗಿ ದೋಚುತ್ತಿರುವುದು ನಮ್ಮದೇ ಹಣವನ್ನು. ಈ ವರ್ಷವೂ ಸುಮಾರು 80,000 ಕೋ. ರೂ. ಮರುಪೂರಣ ಮಾಡಲು ಸರಕಾರ ನಿರ್ಧರಿಸಿದೆ. ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ಹೀಗೆ ಬಂಡವಾಳ ಮರುಪೂರಣ ಮಾಡುತ್ತಾ ಎಷ್ಟು ಸಮಯ ಬ್ಯಾಂಕ್‌ಗಳನ್ನು ಸಾಕಬಹುದು ಎಂಬುದನ್ನು ಸರಕಾರ ಉತ್ತರಿಸಬೇಕು.  ವಂಚನೆ ಪ್ರಕರಣಗಳು ಬ್ಯಾಂಕ್‌ಗಳ ಆಂತರಿಕ ಲೆಕ್ಕ ಪರಿಶೋಧನೆ ಮತ್ತು ರಿಸ್ಕ್ ಮೆನೇಜ್‌ಮೆಂಟ್‌ ವ್ಯವಸ್ಥೆ ದುರ್ಬಲಗೊಂಡಿರುವುದನ್ನು ಬಯಲುಗೊಳಿಸಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಇಷ್ಟು ಬೃಹತ್‌ ಮೊತ್ತದ ವಂಚನೆ ನಡೆದಿದ್ದರೂ ಯಾವುದೇ ಬ್ಯಾಂಕ್‌ ಆಡಳಿತವನ್ನಾಗಲಿ, ನಿರ್ದೇಶಕ ಮಂಡಳಿಯನ್ನಾಗಲಿ ಉತ್ತರದಾಯಿ ಮಾಡಿದ್ದು ಕಂಡಿಲ್ಲ. ಒಂದಿಬ್ಬರು ಅಧಿಕಾರಿಗಳನ್ನು ವಜಾಗೊಳಿಸಿರುವುದು ಬಿಟ್ಟರೆ ಬೇರೆ ಯಾವುದೇ ಕಠಿನ ಕ್ರಮ ಕೈಗೊಂಡಿರುವ ಕುರಿತು ವರದಿಯಾಗಿಲ್ಲ. ಇದರ ಅರ್ಥ ಎಷ್ಟೇ ದೊಡ್ಡ ವಂಚನೆ ನಡೆದರೂ ಯಾರೂ ಉತ್ತರದಾಯಿಗಳು ಅಲ್ಲ ಎಂದೇ? ಒಂದು ವೇಳೆ ಇದೇ ರೀತಿಯ ವಂಚನೆ ಖಾಸಗಿ ವಲಯದ ಬ್ಯಾಂಕ್‌ನಲ್ಲೇನಾದರೂ ನಡೆದಿದ್ದರೆ ಕೈಗೊಳ್ಳುವ ಕ್ರಮದ ತೀವ್ರತೆ ಬೇರೆಯೇ ಇರುತ್ತಿತ್ತು. ಇಂಟರ್ನಲ್‌ ಆಡಿಟ್‌, ಕಾನ್ಕರೆಂಟ್‌ ಆಡಿಟ್‌ ಮತ್ತು ಸ್ಟಾಚ್ಯುಟರಿ ಆಡಿಟ್‌ ಎಂಬ ಮೂರು ಸ್ತರದ ಲೆಕ್ಕಪರಿಶೋಧನೆ ವ್ಯವಸ್ಥೆ ಬ್ಯಾಂಕಿನಲ್ಲಿದೆ. ಇದರ ಜತೆಗೆ ಆರ್‌ಬಿಐ ಕಾಲಕಾಲಕ್ಕೆ ಪರಿಶೋಧನೆ ನಡೆಸುತ್ತದೆ. ಇದರ ಹೊರತಾಗಿಯೂ ವಂಚನೆಗಳು ಸಂಭವಿಸುತ್ತಿವೆ ಎಂದಾದರೆ ವ್ಯವಸ್ಥೆಯಲ್ಲಿ ಎಲ್ಲೋ ಲೋಪ ಇದೆ ಎಂದರ್ಥ. ಈ ಲೋಪವನ್ನು ಸರಿಪಡಿಸಬೇಕಾದರೆ ವಂಚನೆ ಬೆಳಕಿಗೆ ಬಂದ ಬೆನ್ನಿಗೆ ಸಂಬಂಧಪಟ್ಟ ಬ್ಯಾಂಕಿನ ಉನ್ನತ ಸ್ತರದ ಅಧಿಕಾರಿಗಳನ್ನೇ ಅದಕ್ಕೆ ಹೊಣೆಯನ್ನಾಗಿಸುವ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಕೆಲಸ ತುರ್ತಾಗಿ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next