Advertisement

3 ತಿಂಗಳಲ್ಲಿ ಆಸ್ತಿ ಡಿಜಿಟಲೀಕರಣ

12:42 AM Feb 26, 2020 | Lakshmi GovindaRaj |

ಬೆಂಗಳೂರು: ನಗರ ಜಿಲ್ಲಾ ಪಂಚಾಯಿತಿ ವ್ಯಪ್ತಿಯ 96 ಗ್ರಾ.ಪಂ.ಗಳಲ್ಲಿ ಮೂರು ತಿಂಗಳೊಳಗೆ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಜಿ.ಪಂ ಬೊಕ್ಕಸಕ್ಕೆ ಸುಮಾರು 800 ಕೋಟಿ ರೂ. ತೆರಿಗೆ ಹರಿದು ಬರುವ ನಿರೀಕ್ಷೆಯಿದೆ.

Advertisement

ಜಿಲ್ಲಾಡಳಿತಕ್ಕೆ ಮತ್ತಷ್ಟು ಆದಾಯ ತಂದು ಕೊಡುವ ನಿಟ್ಟಿ ನಲ್ಲಿ ಆಸ್ತಿಗಳ ಡಿಜಿಟಲೀಕರಣ ಕೆಲಸ ಈಗಾಗಲೇ ಆರಂಭ ವಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪಂಚಾಯತ್‌ ರಾಜ್‌ ಇಲಾಖೆ ಮತ್ತು ನಗರ ಜಿ.ಪಂ ಯೋಜನಾ ಅಧಿಕಾರಿಗಳು ನಿರತರಾಗಿದ್ದಾರೆ.

96 ಗ್ರಾ.ಪಂಗಳಿಂದ ಜಿ.ಪಂ.ಗೆ ತೆರಿಗೆ ರೂಪದಲ್ಲಿ ಸುಮಾರು 115 ಕೋಟಿ ರೂ. ಬರುತ್ತಿದೆ. ಆಸ್ತಿಗಳ ಡಿಜಿಟಲೀಕರಣ ಬಳಿಕ ಆದಾಯ ಹೆಚ್ಚಲಿದೆ. ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಪಂಚಾಯತ್‌ ರಾಜ್‌ ಇಲಾಖೆಯು ಈಗಾಗಲೇ ಜಿ.ಪಂ ಉಪ ಕಾರ್ಯದರ್ಶಿಗಳನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ ಮತ್ತು ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ಚಿಕ್ಕಜಾಲ, ಚಿಕ್ಕಬಾಣಾವರ, ದೊಡ್ಡ ಜಾಲ ಗ್ರಾ.ಪಂ.ಗಳಲ್ಲಿ ಆರಂಭಿಕ ಹಂತದ ಡಿಜಿಟಲೀಕರಣ ಕೆಲಸ ಪೂರ್ಣಗೊಂಡಿದೆ. ಜತೆಗೆ ಅನೇಕಲ್‌ ತಾಲೂಕಿನ ಹೆನ್ನಾಗರ ಗ್ರಾ.ಪಂನಲ್ಲಿ ಕೆಲಸ ನಡೆದಿದೆ.

ನಗರ ಜಿ.ಪಂ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳ ಸಂಖ್ಯೆ ಹೆಚ್ಚಾಗಿದ್ದು, ತೆರಿಗೆ ಕೂಡ ಸಮರ್ಪಕವಾಗಿ ಸಂಗ್ರಹ ವಾಗುತ್ತಿಲ್ಲ. ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರ್ಪಡೆಯಾಗದಿರುವ ಆಸ್ತಿಗಳೂ ಡಿಜಿಟಲೀಕರಣದಿಂದ ಪತ್ತೆಯಾಗಲಿವೆ.

Advertisement

ಮೂರು ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯ ಲಿದ್ದು, ಒಂದು ಗ್ರಾ.ಪಂಗೆ ಎಂಟರಂತೆ ಸುಮಾರು 250 ಟ್ಯಾಬ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಡಿಜಿ ಟಲೀಕರಣಕ್ಕೆ 5 ಕೋಟಿ.ರೂ. ವೆಚ್ಚವಾಗುವ ನಿರೀಕ್ಷೆ ಯಿದ್ದು, ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಸ್ರೋ ಮೂಲಕ ನಕ್ಷೆ: ಸರ್ಕಾರಿ ಆಸ್ತಿಗಳ ಡಿಜಿಟಲೀಕರಣ ಕಾರ್ಯಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಾಯ ಪಡೆಯಲಾಗುವುದು. ಈಗಾಗಲೇ ಇಸ್ರೋ ದಿಂದ ನಕ್ಷೆ ಪ್ರತಿ ಪಡೆದಿದ್ದು, ನಕ್ಷೆ ಮುಂದುಟ್ಟುಕೊಂಡು ಆಸ್ತಿಗಳ ಡಿಜಿಟಲೀಕರಣ ನಡೆಸುವುದಾಗಿ ಬೆಂಗಳೂರು ನಗರ ಜಿ.ಪಂ ಸಹಾಯಕ ಯೋಜನಾಧಿಕಾರಿ ಕೆ.ಜಿ.ಜಗದೀಶ್‌ ತಿಳಿಸಿದ್ದಾರೆ.

ಹೊರಗುತ್ತಿಗೆ ಸಂಸ್ಥೆ ನೆರವು: ಆಸ್ತಿ ಡಿಜಿಟಲೀಕರಣ ಕೆಲಸಕ್ಕೆ ಗ್ರಾ.ಪಂ ಸಿಬ್ಬಂದಿ ಜತೆಗೆ ಹೊರಗುತ್ತಿಗೆ ಸಂಸ್ಥೆ ಸಿಬ್ಬಂದಿಯ ನೆರವು ಪಡೆಯಲಾಗುತ್ತಿದೆ. ಇವರೆಲ್ಲರಿಗೂ ಇ-ಸ್ವತ್ತು, ಮೊಬೈಲ್‌ ಆ್ಯಪ್‌ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ಮೂರು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ 32 ಗ್ರಾ.ಪಂಗಳಲ್ಲಿ ಆಸ್ತಿ ಡಿಜಿಟಲೀಕರಣ ಆರಂಭವಾಗಿದೆ. ಮೂರು ಹಂತಗಳಲ್ಲಿ ಪ್ರಕ್ರಿಯೆ ನಡೆಯಲಿದ್ದು, ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ದಾಯ ಹೆಚ್ಚಿಸುವ ಉದ್ದೇಶದಿಂದ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಮತ್ತು ಜಿ.ಪಂ ಈ ಯೋಜನೆ ಕೈಗೊಂಡಿವೆ.
-ಕೆ.ಶಿವರಾಮೇಗೌಡ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next