ಬೆಂಗಳೂರು: ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ ) ಪ್ರತ್ಯೇಕ ಸಚಿವಾಲಯ ಸ್ಥಾಪನೆ ಹಾಗೂ ಆ ಸಮುದಾಯಕ್ಕೆ ನೆರವಾಗಲು ಪ್ರತ್ಯೇಕ ನೀತಿ ಜಾರಿಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆ ಕಲಾಪ ವೀಕ್ಷಣೆಗೆ ಎನ್‌ಆರ್‌ಐ ತಂಡ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದ ನಿಲುವನ್ನು ಪ್ರಕಟಿಸಿದರು. ನಾನು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನ್ನನ್ನು ಭೇಟಿ ಮಾಡಿದ ಎನ್‌ಆರ್‌ಐ ನಿಯೋಗ ಕೇರಳ ಸಹಿತ ವಿವಿಧ ರಾಜ್ಯಗಳಲ್ಲಿ ಎನ್‌ಆರ್‌ಐ ಸಚಿವಾಲಯವಿದೆ. ಆದೇ ರೀತಿ ಕರ್ನಾಟಕದಲ್ಲೂ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವಂತೆ ಬೇಡಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ ಮಾತನಾಡಿ, ಎನ್‌ಆರ್‌ಐ ಸಮುದಾಯದಲ್ಲಿ ಹೆಚ್ಚಿನವರು ಉಡುಪಿ, ಮಂಗಳೂರಿನವರಿದ್ದಾರೆ. ವಿದೇಶದಲ್ಲಿ ಜೀವನ ಕಟ್ಟಿಕೊಂಡರೂ ದೇಶದ ಸಂಸ್ಕೃತಿಯನ್ನು ಅವರು ಬಿಟ್ಟಿಲ್ಲ. ಜತೆಗೆ ಇಲ್ಲಿನ ಅಭಿವೃದ್ಧಿ ಕೆಲಸಕ್ಕೂ ಸಹಕಾರ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಎನ್‌ಆರ್‌ಐಗಳು ವಿವಿಧ ರೀತಿ ಸಮಸ್ಯೆ ಎದುರಿಸುತ್ತಿದ್ದು ಅವರ ಆಸ್ತಿ ರಕ್ಷಣೆ, ಹೂಡಿಕೆಗೆ ಅವಕಾಶ ನೀಡುವುದು ಸಹಿತ ವಿವಿಧ ರೀತಿ ಅನುಕೂಲ ಮಾಡಿಕೊಡಲು ಪ್ರತ್ಯೇಕ ನೀತಿ ತರುವ ಚಿಂತನೆ ಇದೆ ಎಂದರು.
ಆಡಳಿತ ಪಕ್ಷದ ಪರವಾಗಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್,ಎನ್.ಎ.ಹ್ಯಾರೀಸ್, ಅಶೋಕ್ ಕುಮಾರ್ ರೈ, ಡಾ| ರಂಗನಾಥ್, ವಿಪಕ್ಷದಿಂದ ಅರವಿಂದ ಬೆಲ್ಲದ್, ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು.
ಎನ್‌ಆರ್‌ಐ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು 15 ರಾಷ್ಟ್ರಗಳ ಅನಿವಾಸಿ ಭಾರತೀಯರೊಂದಿಗೆ ವೀಕ್ಷಕರ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.