ಬೆಂಗಳೂರು: ಗರ್ಭಿಣಿ ಮತ್ತು ಬಾಣಂತಿಯರಿಗೆ ಪೋಷಣ್ ಅಭಿಯಾನದಡಿ ನೀಡಲಾಗುವ ಬಿಸಿಯೂಟವನ್ನು ಅಂಗನವಾಡಿ ಕೇಂದ್ರಗಳಲ್ಲೇ ವಿತರಿಸಬೇಕೋ ಅಥವಾ ನೇರವಾಗಿ ಮನೆಗೆ ತಲುಪಿಸಬೇಕೋ ಎನ್ನುವ ವಿಚಾರ ಮೇಲ್ಮನೆಯಲ್ಲಿ ಸುದೀರ್ಘ ಚರ್ಚೆಗೆ ಕಾರಣವಾಯಿತು.
ಮಂಗಳವಾರ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ, ಅಂಗನವಾಡಿ ಕೇಂದ್ರಗಳಿಗೇ ತೆರಳಿ ಬಿಸಿಯೂಟ ಪಡೆಯುವ ಪದ್ಧತಿ ಅತ್ಯಂತ ಅಮಾನವೀಯ. ಊಟಕ್ಕಾಗಿ ತುಂಬು ಗರ್ಭಿಣಿ ಅಂಗನವಾಡಿ ಕೇಂದ್ರದವರೆಗೆ ಬರುವುದು ಎಷ್ಟು ಸರಿ? ಇದೊಂದು ರೀತಿ ಭಿಕ್ಷೆಯಂತೆ ಆಗುತ್ತದೆ. ಮನೆಗೇ ಬಿಸಿಯೂಟ ತಲುಪಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಭಾರತಿ ಶೆಟ್ಟಿ, ಊಟಕ್ಕಾಗಿ ಮೆರವಣಿಗೆಯಲ್ಲಿ ಗರ್ಭಿಣಿಯನ್ನು ಕರೆತರುವುದು ಅತ್ಯಂತ ಅಸಹ್ಯ ಪದ್ಧತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ನ ಶರವಣ, ಕಾಂಗ್ರೆಸ್‌ನ ಪಿ.ಆರ್. ರಮೇಶ್ ಮತ್ತಿತರ ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು.
ಬಿಜೆಪಿಯ ತೇಜಸ್ವಿನಿ ಗೌಡ, ಸರಕಾರ ಗರ್ಭಿಣಿ ಮುಂದೆ ಆಯ್ಕೆ ನೀಡುವುದು ಸೂಕ್ತ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ್, ಅಂಗನವಾಡಿ ಕೇಂದ್ರಗಳಲ್ಲೇ ಬಿಸಿಯೂಟ ಸ್ವೀಕರಿಸಬಹುದು ಅಥವಾ ಮನೆಗೆ ಕೊಂಡೊಯ್ಯಬಹುದು. ಈ ಎರಡೂ ಆಯ್ಕೆಗಳನ್ನು ನೀಡಲಾಗಿದೆ ಎಂದರು.