ವಿಧಾನಸಭೆ: ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಕೊಡುಗು ಜಿಲ್ಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿತು.
ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡುವಾಗ ಸ್ವತಃ ಸಿದ್ದರಾಮಯ್ಯನವರು ಈ ವಿಷಯ ಪ್ರಸ್ತಾಪಿಸಿದರು. ಆಗ ಕೆ.ಜಿ. ಬೋಪ್ಪಯ್ಯ ಹಾಗೂ ಅಪ್ಪಚ್ಚು ರಂಜನ್ ವಿರುದ್ಧ ನೇರ ಆರೋಪ ಮಾಡಿದ ಸಿದ್ದರಾಮಯ್ಯ ಘಟನೆಗೆ ಇವರಿಬ್ಬರೇ ನೇರ ಕಾರಣ. ಕೊಡಗಿನ ಜನ ಒಳ್ಳೆಯವರು. ಆದರೆ, ಈ ಇಬ್ಬರ ಕುಮ್ಮಕ್ಕಿನಿಂದ ಇವತ್ತು ಕೊಡಗು ಹಾಳಾಗಿದೆ. ಈ ಇಬ್ಬರಿಂದಲೇ ಕೊಡಗು ಅಭಿವೃದ್ಧಿ ನಾಶವಾಗಿದೆ, ಅಲ್ಲಿನ ಮಾರ್ಯಾದೆ ಹಾಳಾಗಿದೆ ಎಂದು ಆರೋಪಿಸಿದರು. ಅಲ್ಲದೇ ಕೊಡಗು ಏನೂ ಇವರಿಬ್ಬರ ಆಸ್ತಿನಾ? ಇವರೇನು ಅಲ್ಲಿನ ಪಾಳೆಗಾರರಾ? ಇಂತಹ ಷಡ್ಯಂತ್ರ, ಗೊಡ್ಡು ಬೆದರಿಕೆಗೆ ಹೆದರಲ್ಲ. ನಾಳೆಯೇ ಕೊಡಗಿಗೆ ಬರುತ್ತೇನೆ ಎಂದು ಸವಾಲು ಹಾಕಿದರು.
ಅದಕ್ಕೆ, ನಾವೇನು ಮಾಡಿಲ್ಲ. ನೀವು ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು, ಟಿಪ್ಪು ಜಯಂತಿ ಆಚರಿಸಿದ್ದು ಎಂಬ ಕಾರಣಕ್ಕೆ ಅಲ್ಲಿನ ಜನ ಸಿಟ್ಟು ವ್ಯಕ್ತಪಡಿಸಿದರು. ನೀವು ಹಾಗೆಲ್ಲಾ ಪ್ರಚೋದನಾಕಾರಿಯಾಗಿ ಮಾತನಾಡಬಾರದಿತ್ತು ಎಂದು ಕೆ.ಜೆ. ಬೋಪಯ್ಯ ಹಾಗೂ ಅಪ್ಪಚ್ಚು ರಂಜರ್ ಹೇಳಿದರು. ನಿಮ್ಮಂತವಹರಿಂದಲೇ ಕೊಡಗು ಹಾಳಾಗಿದೆ. ಕೊಡಗಿನ ಜನ ಒಳ್ಳೆಯವರು. ಅವರನ್ನು ನೀವಿಬ್ಬರೇ ಎತ್ತಿಕಟ್ಟಿದ್ದು ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ಈ ವೇಳೆ ಇಬ್ಬರು ಶಾಸಕರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತರೆ, ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಪರ ಆಡಳಿತ ಪಕ್ಷದ ಸದಸ್ಯರ್ಯಾರೂ ಬೆಂಬಲಕ್ಕೆ ಬರಲಿಲ್ಲ. ಇಬ್ಬರೇ ಕಾಂಗ್ರೆಸ್ ಸದಸ್ಯರನ್ನು ಎದುರಿಸಬೇಕಾಯಿತು.
ಪೊಲೀಸ್ ವರದಿ ಸದನಕ್ಕೆ ಮಂಡಿಸಿ: ನಾವು ಮೊಟ್ಟೆ ಎಸೆದಿರುವುದನ್ನು ಸಮರ್ಥಿಸುವುದಿಲ್ಲ. ಆದರೆ, ಮೊಟ್ಟೆ ಎಸೆದವರು ನಿಮ್ಮ ಪಕ್ಷದವರೇ ಎಂದು ಅಪ್ಪಚ್ಚು ರಂಜನ್ ಹೇಳಿದಾಗ, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಸದಸ್ಯರು ಅಪ್ಪಚ್ಚು ರಂಜನ್ ವಿರುದ್ಧ ಮುಗಿಬಿದ್ದರು. ನಮ್ಮ ಪಕ್ಷದವರಾಗಿದ್ದರೆ ಜಾಮೀನು ಕೊಡಿಸಲು ನೀವು ಯಾಕೆ ಹೋಗಿದ್ದೀರಿ ಎಂದು ಕೇಳಿದರು.
ನಾನು ಕಪ್ಪ ಬಾವುಟ ಪ್ರದರ್ಶಿಸಿದವರನ್ನು ಬಿಡಿಸಿಕೊಂಡು ಬರಲು ಹೋಗಿದ್ದೆ ಎಂದು ಅಪ್ಪಚ್ಚು ರಂಜನ್ ಹೇಳಿದರು. ಪಿತೂರಿ ಇವರದ್ದೇ ಎಂದು ಸ್ವತಃ ಅವರೇ ಒಪ್ಪಿಕೊಂಡಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪೊಲೀಸರು ನಿಷ್ಕ್ರಿಯರಾಗಿದ್ದರು ಎಂದು ಸಿದ್ದರಾಮಯ್ಯ ಆರೋಪಿಸಿದರು. ಅದನ್ನು ಅಲ್ಲಗಳೆದ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರು ಸಕ್ರಿಯರಾಗಿದ್ದರು, ತಕ್ಷಣ ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಮರ್ಥನೆ ನೀಡಿದರು. ಘಟನೆ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಪ್ಪು ಬಾವುಟ ಪ್ರದರ್ಶನ, ಮೊಟ್ಟೆ ಎಸೆಯುವುದು ಇದನ್ನೆಲ್ಲಾ ಹಿಂದೆ ನಾವೂ ಮಾಡಿದ್ದೇವೆ. ಈಗ ಅದರ 10 ಪಟ್ಟು ಮಾಡಲು ಬರುತ್ತದೆ. ಮನಸ್ಸು ಮಾಡಿದರೆ ರಾಜ್ಯಾದ್ಯಂತ ನಾಳೆಯೇ ಅದನ್ನು ಮಾಡಿಸಬಲ್ಲೆ. ಆದರೆ, ಆ ರೀತಿ ಮಾಡಲು ಹೋಗಲ್ಲ. ಈ ರೀತಿ ಕಪ್ಪು ಬಾವುಟ ಪ್ರದರ್ಶನ ಮಾಡುವವರು, ಮೊಟ್ಟೆ ಎಸೆಯುವವರು ವೀರರೂ ಅಲ್ಲ, ಶೂರರೂ ಅಲ್ಲ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ