Advertisement

ಕಾಂಗ್ರೆಸ್‌ ಸಭಾತ್ಯಾಗದ ನಡುವೆ ಖಾಸಗಿ ವಿವಿ 6 ವಿಧೇಯಕಗಳಿಗೆ ಮೇಲ್ಮನೆ ಸಮ್ಮತಿ

09:51 PM Feb 22, 2023 | Team Udayavani |

ಬೆಂಗಳೂರು: ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ಸೇರಿ ರಾಜ್ಯದಲ್ಲಿ ಆರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಆರು ಮಸೂದೆಗಳಿಗೆ ಬುಧವಾರ ವಿಪಕ್ಷ ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗದ ನಡುವೆ ಅನುಮೋದನೆ ನೀಡಲಾಯಿತು.

Advertisement

ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಅವರಿಗೆ ಖಾಸಗಿ ವಿವಿ ಸಂಬಂಧದ ಮಸೂದೆ ಮಂಡನೆಗೆ ಅವಕಾಶ ಕಲ್ಪಿಸಿದರು. ಅದರಂತೆ ಮಂಡನೆಯಾಗುತ್ತಿದ್ದಂತೆ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ರಾಜ್ಯದಲ್ಲಿ ಒಮ್ಮೆಲೆ ಆರು ಖಾಸಗಿ ವಿವಿಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ. ಈ ಮಸೂದೆಗಳ ಬಗ್ಗೆ ಅಧ್ಯಯನ ನಡೆಸಲು ತುಸು ಕಾಲಾವಕಾಶ ಬೇಕು. ಹಾಗಾಗಿ, ಮಸೂದೆದ ಪ್ರಸ್ತಾವನೆ ಮತ್ತು ಆ ಸಂಬಂಧದ ಚರ್ಚೆಯನ್ನು ಗುರುವಾರ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ, ತರಾತುರಿಯಲ್ಲಿ ತಂದ ಈ ಮಸೂದೆದ ಚರ್ಚೆ ತತ್‌ಕ್ಷಣಕ್ಕೆ ಬೇಡ. ಕೊನೆ ಪಕ್ಷ ಸಂಜೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದನದಲ್ಲಿ ಮಸೂದೆಗಳಿಗೆ ಆದ್ಯತೆ ಇರುತ್ತದೆ. ಅಷ್ಟಕ್ಕೂ ಸಂಬಂಧಪಟ್ಟ ಸಚಿವರು ಮಸೂದೆ ಮಂಡಿಸಿದ್ದಾರೆ. ಈಗ ಮುಂದೂಡುವಂತೆ ಹೇಳುತ್ತಿರುವುದು ಸರಿಯಲ್ಲ ಎಂದರು.

ಪ್ರತಿಕ್ರಿಯಿಸಿದ ಸಭಾಪತಿಗಳು, ಈಗಾಗಲೇ ಮಸೂದೆ ಮಂಡನೆಯಾಗಿದೆ. ಈ ಹಂತದಲ್ಲಿ ಮುಂದೂಡುವುದು ಸರಿಯಾದ ಕ್ರಮವಲ್ಲ; ಅಷ್ಟಕ್ಕೂ ಒಂದು ತಾಸಿನಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಬೇಕಿದ್ದರೆ ಕೊನೆಯಲ್ಲಿ ನೀವು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದು ಹೇಳಿದರು. ಇದನ್ನು ಆಕ್ಷೇಪಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ
ಅನಂತರ ನಡೆದ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ರಾಜ್ಯದಲ್ಲಿ ಪ್ರಸ್ತುತ 69 ವಿಶ್ವವಿದ್ಯಾಲಯಗಳಿವೆ. ಇದರಲ್ಲಿ 34 ಸರಕಾರಿ, 11 ಡೀಮ್ಡ್, 26 ಖಾಸಗಿಗೆ ಸೇರಿವೆ. ಈ ಮಧ್ಯೆ ಮತ್ತೆ ಆರು ವಿವಿಗಳು ತರಾತುರಿಯಲ್ಲಿ ತರುವ ಆವಶ್ಯಕತೆ ಇರಲಿಲ್ಲ. ಇವುಗಳ ನಿಯಂತ್ರಣ ಹೇಗೆ? ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆಯೇ? ಹೂಡಿಕೆ ಎಲ್ಲಿಂದ ಮತ್ತು ಹೇಗೆ ಆಗಲಿದೆ ಮತ್ತಿತರ ಅಂಶಗಳ ಕುರಿತು ಸ್ಪಷ್ಟತೆ ಇಲ್ಲ ಎಂದು ಹೇಳಿದರು. ಸದಸ್ಯರಾದ ಪುಟ್ಟಣ್ಣ, ತೇಜಸ್ವಿನಿಗೌಡ, ರುದ್ರೇಗೌಡ, ಎಸ್‌.ವಿ. ಸಂಕನೂರು, ನವೀನ್‌ ಮತ್ತಿತರರು ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next