ವಿಧಾನ ಪರಿಷತ್ತು: ಗಾಂಧಿ ಜಯಂತಿಗೆ ಪರಿಷ್ಕರಣೆಯೊಂದಿಗೆ ಮರುಜಾರಿಗೊಳ್ಳಲಿರುವ ಯಶಸ್ವಿನಿ ಯೋಜನೆಯನ್ನು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ, ಅಗತ್ಯ ಸಿದ್ಧತೆಗಳೊಂದಿಗೆ ಪರಿಚಯಿಸಬೇಕು ಎಂದು ಮೇಲ್ಮನೆ ಸದಸ್ಯರು ಸರ್ಕಾರಕ್ಕೆ ಸಲಹೆ ಮಾಡಿದರು.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ರಾಠೊಡ ವಿಷಯ ಪ್ರಸ್ತಾಪಿಸಿ, ಯಶಸ್ವಿನಿ ಯೋಜನೆ ಘೋಷಣೆಯಾಗಿ ಆರು ತಿಂಗಳಾಗಿದ್ದು, 300 ಕೋಟಿ ರೂ. ಮಂಜೂರು ಕೂಡ ಆಗಿದೆ. ಆದರೆ, ಇದುವರೆಗೆ ಯಾವ ಕೆಲಸವೂ ಆಗಿಲ್ಲ. ಈ ಸಂಬಂಧದ ಪ್ರತಿಯೊಂದು ಪ್ರಶ್ನೆಗೂ ಬರೀ ಪ್ರಗತಿಯಲ್ಲಿದೆ ಎಂಬ ಉತ್ತರ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, “ಈಗಾಗಲೇ ಕೇಂದ್ರದ ಆಯುಷ್ಮಾನ್ ಭಾರತ ಇದೆ. ಅದರೊಂದಿಗೆ ಈ ಯೋಜನೆ ಪರಿಚಯಿಸಲಾಗುತ್ತಿದೆ. ಹಾಗಾಗಿ, ಇದುವರೆಗೆ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿತ್ತು. ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ವಿಲೀನಗೊಳಿಸಲಾಗಿತ್ತು. ಈಗಲೂ ಅಲ್ಲಿಯೇ ಇರಬೇಕೇ? ಫಲಾನುಭವಿ ಪುನರಾವರ್ತನೆಯಾಗದಂತೆ ಏನು ಮಾಡಬಹುದು? ಇಂತಹ ಹಲವು ಅಂಶಗಳು ಇವೆ. ಅವೆಲ್ಲವುಗಳ ಚರ್ಚೆ ನಡೆದಿದೆ. ಈ ಮಧ್ಯೆ ಯೋಜನೆಯ ಲೋಗೋ ಬಿಡುಗಡೆ ಮಾಡಲಾಗಿದೆ. ಹಿಂದಿದ್ದ ಟ್ರಸ್ಟ್ ರದ್ದುಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಗೆ ಕೊಟ್ಟ ಮೇಲೆ ಹಾಳಾಯ್ತು: ಇದಕ್ಕೆ ದನಿಗೂಡಿಸಿದ ಬಿಜೆಪಿಯ ಎಚ್. ವಿಶ್ವನಾಥ್, ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಈ ಯೋಜನೆಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನಕ್ಕೆ ಒಳಪಡಿಸಿದ್ದರು. ಇದೊಂದು ಅತ್ಯುತ್ತಮ ಯೋಜನೆಯಾಗಿತ್ತು. ಮತ್ತೊಂದು ಕಾಂಗ್ರೆಸ್ (ಸಿದ್ದರಾಮಯ್ಯ ಅವಧಿಯಲ್ಲಿ) ಇದನ್ನು ರದ್ದುಗೊಳಿಸಿದ್ದು ಖೇದಕರ ಸಂಗತಿ. ಆರೋಗ್ಯ ಇಲಾಖೆಗೆ ಕೊಟ್ಟ ನಂತರವೇ ಇದು ಹಾಳಾಯಿತು ಎಂದರು.