ವಿಧಾನಸಭೆ: ವಿಧಾನಸಭಾ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆಯ ಮೇಲೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್, ಶಿಕಾರಿಪುರ ರಾಜ್ಯದಲ್ಲಿ ಶಿಕಾರಿಪುರ ಬಿಟ್ಟರೆ ಅತಿ ಹೆಚ್ಚು ಅನುದಾನ ಬಾದಾಮಿ ಕ್ಷೇತ್ರಕ್ಕೆ ಹೊಗಿದೆ. ನಿಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆ ಎಂದು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.
ಅವರ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನೀವು ಅನುದಾನ ಬೇಕೆಂದು ಧರಣಿ ಮಾಡಿ, ಇಲ್ಲಾಂದ್ರೆ, ನೀವೇ ಮುಖ್ಯಮಂತ್ರಿಯಾಗ್ರಿ, ಬೊಮ್ಮಾಯಿ ಅವರನ್ನು ಕಿತ್ತು ಹಾಕಿ, ಅವಾಗ ನೀವು ಬೇಕಾದಷ್ಟು ಅನುದಾನ ಪಡೆಯಬಹುದು ಎಂದು ತಿರುಗೇಟು ನೀಡಿದರು.
ಈ ಬಜೆಟ್‌ನಲ್ಲಿ ಸಿಎಂ ತಮ್ಮ ಕ್ಷೇತ್ರಕ್ಕೆ ಎಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ನೋಡಿದ್ದೀರಾ. ಎಲ್ಲಿ ನೋಡಿದರೂ ಹಾವೇರಿ, ಸಿಗ್ಗಾವಿ ಅಂತ ಇದೆ ಎಂದು ಹೇಳೀದರು.
ಮತ್ತೆ ಪ್ರತಿಕ್ರಿಯಿಸಿದ ಯತ್ನಾಳ ನೀವು ಹಾಲಿ, ಮಾಜಿ ಮುಖ್ಯಮಂತ್ರಿಗಳು ಒಳಗೊಳಗೆ ಒಪ್ಪಂದ ಮಾಡಿಕೊಂಡು, ಹಗಲಿ ಕಚ್ಚಾಡಿ ರಾತ್ರಿ ಎಲ್ಲರೂ ಒಂದೇ ಅಂದುಕೊಂಡು ನಿಮಗೆ ಬೇಕಾದಷ್ಟು ಅನುದಾನ ಹಾಕಿಕೊಂಡರೆ, ನಮ್ಮಂಥ ಸಾಮಾನ್ಯ ಶಾಸಕರ ಕಥೆ ಏನು ಎಂದು ಹೇಳಿದರು.
ಅದ್ಕೆ ನೀನೂ ಸಿಎಂ ಆಗಪ್ಪಾ ಎಂದು ಸಿದ್ದರಾಮಯ್ಯ ಯತ್ನಾಳ್ ಕಾಲೆಳೆದರು. ಆಗ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಈಗ ಅವರನ್ನು ಕೆಣಕಬೇಡಿ ಬಿಡಿ, ಶಾಂತವಾಗಿದ್ದಾರೆ ಎಂದು ಹೇಳಿದರು.