Advertisement

ಕಲಾಪದಲ್ಲಿ ಸಮಯ, ಶಿಸ್ತು ಪಾಲನೆಯಾಗಲಿ

11:17 PM Dec 22, 2021 | Team Udayavani |

ಬೆಳಗಾವಿ: ಸಮಯ ಹಾಗೂ ಶಿಸ್ತುಪಾಲನೆ ಬಗ್ಗೆ ವಿಧಾನಸಭೆಯಲ್ಲಿ ಬುಧವಾರ ಗಂಭೀರ ಚರ್ಚೆ ನಡೆಯಿತು.

Advertisement

ಶೂನ್ಯವೇಳೆಯಲ್ಲಿ ಗಮನ ಸೆಳೆಯುವ ಸೂಚನೆ ಸಂದರ್ಭ ಪ್ರತಿಯೊಬ್ಬ ಸದಸ್ಯರು ಮಾತನಾಡಿ ಸದನದ ಸಮಯ ವ್ಯರ್ಥ ಆಗುತ್ತಿರುವ ಬಗ್ಗೆ ಮೂರೂ ಪಕ್ಷಗಳ ಹಿರಿಯ ಸದಸ್ಯರು ಪ್ರಸ್ತಾವಿಸಿ, ಸ್ಪೀಕರ್‌ ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಈ ಬಗ್ಗೆ ಗಮನ ಹರಿಸಿ ಪಕ್ಷಗಳ ಸದಸ್ಯರ ಸಂಖ್ಯೆ ಆಧಾರದಲ್ಲಿ ಚರ್ಚೆಗೆ ಇಂತಿಷ್ಟು ಸಮಯ ನಿಗದಿ ಮಾಡುವುದು ಸೂಕ್ತ ಎಂಬ ಸಲಹೆ ನೀಡಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನಕ್ಕೆ ಇರುವ ಘನತೆ, ಗೌರವ ಹಾಗೂ ಜನರ ಅಪೇಕ್ಷೆ ಈಡೇರಿಸುವ ದೇಗುಲ ಎಂಬ ಭಾವನೆ ಎಲ್ಲರಲ್ಲೂ ಇದೆ. ಪವಿತ್ರ ಭಾವನೆ ಉಳಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಕೇವಲ ಬಿ ಫಾರಂ, ಟಿಕೆಟ್‌ ನೀಡುವುದು, ಗೆಲ್ಲಿಸುವುದು ಮಾತ್ರವಲ್ಲ. ಶಾಸಕರ ನಡವಳಿಕೆಯನ್ನು ನಿಯಂತ್ರಿಸಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಲಾಪಕ್ಕೆ ಸಂಬಂಧಿಸಿದ ನಿಯಮದಂತೆ ನಡೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸಹಜವಾಗಿ ಹೆಚ್ಚಿನ ಸಮಯ ವಿಪಕ್ಷಕ್ಕೆ, ಅನಂತರ ಆಡಳಿತ ಪಕ್ಷದ ಸದಸ್ಯರಿಗೆ ನೀಡಬೇಕು. ಸದಸ್ಯರ ಸಂಖ್ಯೆ ಆಧಾರದ ಮೇಲೆ ಸಮಯದ ಹಂಚಿಕೆ ಆಗಬೇಕು. ಫ‌ಲಪ್ರದ ಚರ್ಚೆಯೂ ಹೆಚ್ಚಾಗಬೇಕು. ಕೆಲವೊಮ್ಮೆ ಸದನ ವಿಸ್ತರಿಸಬೇಕು ಎಂದವರೇ ಸದನದಲ್ಲಿ ಇರುವುದಿಲ್ಲ. ಇದು ಸರಿಯಲ್ಲ ಎಂದರು.

ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ಒಂದು ದಿನವೂ ಪ್ರಮುಖವಾದ ಯಾವುದೇ ಚರ್ಚೆ ಸದನದಲ್ಲಿ ಬರುತ್ತದೆ ಎಂಬುದನ್ನು ನಿರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ಚರ್ಚೆ ಆಗದೇ ಇದ್ದರೆ ಈ ಮನೆ ಯಾಕೆ? ಸಭಾಧ್ಯಕ್ಷರು ಸ್ವಲ್ಪ ಬಿಗಿಯಾಗಬೇಕು ಎಂದರು.

Advertisement

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಮೌಲ್ಯಾಧಾರಿತ ಚರ್ಚೆಗೆ ನಾವು ಬೆಂಬಲ ಸೂಚಿಸಿದ್ದೇವೆ. ಸಮಯ ವ್ಯರ್ಥ ಆಗಬಾರದು ಎಂದರು.

ಸದಸ್ಯರಾದ ಎಚ್‌.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ ಮಾತನಾಡಿದರು.

ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್‌ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ

ನೀವು ಬಿಗಿ ನಿಲುವು ತಾಳಲೇಬೇಕು: ಬಿಎಸ್‌ವೈ
ಸಂಸದೀಯ ವ್ಯವಹಾರ ಸಚಿವ ಮತ್ತು ಅಧ್ಯಕ್ಷರು ಒಟ್ಟಾಗಿ, ಯಾರು ಯಾವ ವಿಷಯ ಎತ್ತುತ್ತಾರೆ ಮತ್ತು ಯಾವುದಕ್ಕೆ ಅವಕಾಶ ನೀಡಬೇಕು ಎಂಬುದರ ನಿರ್ಧಾರ ಮಾಡಬೇಕು. ಅದರ ಸಂಪೂರ್ಣ ಅಧಿಕಾರ ನಿಮಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ಪೀಕರ್‌ಗೆ ಸಲಹೆ ನೀಡಿದರು. ಪ್ರಮುಖ ವಿಷಯಕ್ಕೆ ಅವಕಾಶ ನೀಡದೆ ಈ ಗೊಂದಲದ ವಾತಾವರಣಕ್ಕೆ ಕಾರಣ ಯಾರು? ನೀವು ಬಿಗಿಯಾದ ನಿಲುವು ತೆಗೆದುಕೊಳ್ಳದೇ ಇರುವುದು. ನಿಮ್ಮ ಬಿಗಿ ನಿಲುವು, ಕಾನೂನು ಚೌಕಟ್ಟಿನಲ್ಲಿ ಅಧಿವೇಶನ ನಡೆಯಬೇಕು. ಅದಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಅನಗತ್ಯವಾಗಿ ಏಳೆಂಟು ಜನ ನಿಂತು ಮಾತಾಡುವುದನ್ನು ತಡೆಯಲು ನೀವು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದರೂ ಯಶಸ್ವಿಯಾಗುತ್ತಿಲ್ಲ. ನೀವು ಬಿಗಿ ನಿಲುವು ತಾಳಲೇ ಬೇಕು. ಇದು ಕೇವಲ ಉಪದೇಶ ಆಗದೇ ಜಾರಿಗೆ ಬರಬೇಕು. ಕಾನೂನು ಸಚಿವರು ಹಾಗೂ ನೀವು ಜಂಟಿಯಾಗಿ ಕೂತು ಚರ್ಚಿಸಬೇಕು ಎಂದು ಹೇಳಿದರು.

ಸದಸ್ಯರ ಹಾಜರಾತಿಯನ್ನು ಸಚೇತಕರು ಗಮನಿಸಬೇಕು. ಗಮನಸೆಳೆಯುವ ಸೂಚನೆ, ಶೂನ್ಯವೇಳೆ ಇತ್ಯಾದಿ ನಿಗದಿ ನಿಯಮಾವಳಿ ಓದಿ ಅರ್ಥ ಮಾಡಿಕೊಳ್ಳಬೇಕು. ವಾಸ್ತವವಾಗಿ ಸದನದಲ್ಲಿ ಅಪಮಾನ, ಮಾನಸಿಕ ಯಾತನೆಗೆ ಗುರಿಯಾಗುವುದು ಅಧ್ಯಕ್ಷಪೀಠ. ನಮ್ಮ ಸಮರ್ಥನೆ ಮಾಡಿಕೊಳ್ಳಲು ಯಾರೂ ಇರಲ್ಲ. ಮಾತಾಡದೇ ಇದ್ದರೆ ಸಭೆ ನಡೆಯದು.
-ರಮೇಶ್‌ ಕುಮಾರ್‌, ಮಾಜಿ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next