ವಿಧಾನ ಪರಿಷತ್ತು: ಕರ್ನಾಟಕ ಜಾನಪದ ಪರಿಷತ್ತು ಹೊರಗುತ್ತಿಗೆ ಆಧಾರದ ಮೆಲೆ ನೇಮಕ ಮಾಡಿಕೊಂಡ 30 ಜನರನ್ನು ಕಾಯಂಗೊಳಿಸುವ ಬಗ್ಗೆ ಆರ್ಥಿಕ ಇಲಾಖೆ ಅಭಿಪ್ರಾಯದೊಂದಿಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಎಂ.ಎಲ್. ಅನಿಲ್ ಕುಮಾರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾನಪದ ಪರಿಷತ್ತು ಶಾಶ್ವತ ಅನುದಾನ ಸಂಹಿತೆಗೆ ಒಳಪಡಿಸಿದ ಸಂದರ್ಭದಲ್ಲಿ ಮಂಜೂರಾದ ಹುದ್ದೆಗಳನ್ನು ಹೊರತುಪಡಿಸಿ 30 ಜನರನ್ನು ಹೊರಗುತ್ತಿಗೆ ಆಧಾರದಲ್ಲಿ ಹೆಚ್ಚುವರಿಯಾಗಿ ನೇಮಕ ಮಾಡಿಕೊಂಡಿದೆ. ಈ ವೇಳೆ ಯಾವುದೇ ಮಾನದಂಡಗಳು ಮತ್ತು ಸರ್ಕಾರದ ಪೂರ್ವಾನುಮತಿಯನ್ನೂ ಪಡೆದಿಲ್ಲ. ಅವರನ್ನು ಹೇಗೆ ಮುಂದುವರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.
ಇಂತಹ ಸಿಬ್ಬಂದಿಗೆ ವೇತನ ಪಾವತಿಗೆ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಈ ಮಧ್ಯೆ ಕಾಯಂ ಮಾಡಿಕೊಳ್ಳುವಂತೆ ಪರಿಷತ್ತು ಕೋರಿದೆ. ಆದ್ದರಿಂದ ನಿಯಮ ಮೀರಿ ನೇಮಕ ಮಾಡಿಕೊಂಡ ಈ ಸಿಬ್ಬಂದಿ ಕುರಿತು ಕೆಲವು ಸ್ಪಷ್ಟೀಕರಣ ಕೋರಿದ್ದು, ಉತ್ತರ ನಿರೀಕ್ಷಿಸಲಾಗಿದೆ. ಪರಿಷತ್ತಿನಿಂದ ಉತ್ತರ ಬಂದ ನಂತರ ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು.
“ಕನ್ನಡ-ಸಂಸ್ಕೃತಿ ಇಲಾಖೆಯಲ್ಲೇ ಇರಲಿ ಜಾನಪದ ವಿವಿ’
ಜಾನಪದ ವಿಶ್ವವಿದ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲೇ ಉಳಿಸಿ, ಅಲ್ಲಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಅನಿಲ ಕುಮಾರ್ ಕೇಳಿದ ಪ್ರಶ್ನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಮಾತನಾಡಿದ ಅವರು, “ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗಲೇ ಜಾನಪದ ವಿವಿ ಆರಂಭಿಸಲಾಯಿತು. ಅದಕ್ಕೆ ಅನುದಾನವನ್ನೂ ಬಿಡುಗಡೆ ಮಾಡಲಾಯಿತು. ನಂತರದಲ್ಲಿ ಅದನ್ನು ಉನ್ನತ ಶಿಕ್ಷಣ ಇಲಾಖೆಗೆ ವಹಿಸಲಾಯಿತು. ತದನಂತರದಲ್ಲಿ ಅಲ್ಲಿ ಚಟುವಟಿಕೆಗಳು ಕುಂಠಿತವಾಗಿವೆ. ಆದ್ದರಿಂದ ಇಬ್ಬರೂ ಸಚಿವರು (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ) ಚರ್ಚಿಸಿ, ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.