ವಿಧಾನ ಪರಿಷತ್ತು: ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ರಾಜ್ಯ ಎಂಬ “ಹೆಗ್ಗಳಿಕೆ’ ನಡುವೆಯೂ ಸರ್ಕಾರ ವಿದ್ಯುತ್ ಖರೀದಿಗಾಗಿಯೇ ಪ್ರತಿ ವರ್ಷ 33 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದೆ!
ಹೌದು, ಸ್ವತಃ ಇಂಧನ ಸಚಿವ ಸುನಿಲ್ ಕುಮಾರ್ ಈ ಅಂಶವನ್ನು ಬಹಿರಂಗಪಡಿಸಿದರು.”ವಿದ್ಯುತ್ ಖರೀದಿ ಒಪ್ಪಂದ’ (ಪಿಪಿಎ)ದಡಿ ಸೇರಿದಂತೆ ವಿವಿಧ ರೀತಿಯ ವಿದ್ಯುತ್ ಖರೀದಿಗಾಗಿಯೇ ವಾರ್ಷಿಕ 33 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಮಧ್ಯೆ ವಾರ್ಷಿಕ 13 ಸಾವಿರ ಕೋಟಿ ರೂ. ರೈತರಿಗೆ ನೀಡಲಾಗುವ ಉಚಿತ ವಿದ್ಯುತ್‌ಗೆ ಸಂಬಂಧಿಸಿದ ಸಬ್ಸಿಡಿ ಮೊತ್ತ ಹಾಗೂ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಸಬ್ಸಿಡಿ ವರ್ಷಕ್ಕೆ 600-700 ಕೋಟಿ ರೂ. ಆಗುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಸೋಮವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಮೇಲೆ ಆಗಸ್ಟ್ ಅಂತ್ಯದವರೆಗೆ 38,973 ಕೋಟಿ ರೂ. ಸಾಲದ ಹೊರೆ ಇದೆ. ಇದರಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಎಂಬ ಎರಡು ಪ್ರಕಾರದ ಸಾಲಗಳಿದ್ದು, ಎಪಿಡಿಆರ್‌ಪಿ, ಆರ್‌ಜಿಜಿವಿವೈ, ಎನ್‌ಜೆವೈ, ಐಪಿಡಿಎಸ್ ಮತ್ತಿತರ ಯೋಜನೆಗಳಿಗೆ ಬಂಡವಾಳ ಕಾಮಗಾರಿಗಳಿಗಾಗಿ ದೀರ್ಘಾವಧಿ ಮತ್ತು ವಿದ್ಯುತ್ ಖರೀದಿ ಬಿಲ್‌ಗಳ ಪಾವತಿಗಾಗಿ ಸಾಲ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
6.30 ಲಕ್ಷ ಹೊಸದಾಗಿ ಸೇರ್ಪಡೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ಅಂದರೆ ಕಳೆದ ಮೂರು ವರ್ಷಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ಪೂರೈಕೆ ಯೋಜನೆ ಅಡಿ 6.33 ಲಕ್ಷ ರೈತರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಪ್ರಸ್ತುತ 38 ಲಕ್ಷ ರೈತರ ಐಪಿ ಸೆಟ್‌ಗಳಿಗೆ ನಿತ್ಯ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರ ವಾರ್ಷಿಕ ಸಬ್ಸಿಡಿ ಮೊತ್ತ 13 ಸಾವಿರ ಕೋಟಿ ರೂ. ಆಗುತ್ತಿದೆ. ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ ಎಂದ ಅವರು, ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು 2002ರಿಂದ ಸಾಲ ಪಡೆಯಲು ಆರಂಭಿಸಿದ್ದು, ಇದರ ಮರುಪಾವತಿ ಅವಧಿಯು 2047ರವರೆಗೂ ಇದೆ ಎಂದರು.
ವಿದ್ಯುತ್ ಕಂಪನಿ ಸಾಲದ ಪ್ರಮಾಣ ಕೋಟಿಗಳಲ್ಲಿ (ಆಗಸ್ಟ್ 2022ರವರೆಗೆ)
ಕೆಪಿಟಿಸಿಎಲ್ 9,590.99
ಬೆಸ್ಕಾಂ 13,613.23
ಸೆಸ್ಕ್ 3,536.25
ಮೆಸ್ಕಾಂ 1,282.38
ಹೆಸ್ಕಾಂ 7,480.65
ಜೆಸ್ಕಾಂ 3,472.15