ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸದೆ ಹೈಕಮಾಂಡ್‌ಗೆ ತಲೆಬಿಸಿ ಮಾಡಿರುವ
ನಟ ಹಾಗೂ ಮಂಡ್ಯ ಶಾಸಕ ಅಂಬರೀಷ್‌ಗೆ 24 ಗಂಟೆಗಳಲ್ಲಿ ಸ್ಪರ್ಧೆ ಮಾಡಲಾಗುವುದೋ ಇಲ್ಲವೋ ಎಂಬುದರ ಬಗ್ಗೆ ತಿಳಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆಂದು ಎಂದು ಹೇಳಲಾಗಿದೆ.
ಸೋಮವಾರದಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುವುದರಿಂದ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ತಿಳಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅಂಬರೀಷ್ ಅವರು ಮಂಡ್ಯ ಜಿಲ್ಲೆಯಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ. ಶ್ರೀರಂಗಪಟ್ಟಣದಲ್ಲಿ ಪುಟ್ಟೇಗೌಡ, ಮೇಲುಕೋಟೆಯಲ್ಲಿ ಎಲ್.ಡಿ.ರವಿ, ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು, ಕೆ.ಆರ್.ಪೇಟೆಯಲ್ಲಿ ಕಿಕ್ಕೇರಿ ಮಹೇಶ್ ಅವರಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ,ಶ್ರೀರಂಗಪಟ್ಟಣದಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿರುವ ರಮೇಶ್ ಬಂಡಿಸಿದ್ದೇಗೌಡ, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದು ಅಂಬರೀಷ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಕೆ.ಸಿ.ವೇಣುಗೋಪಾಲ್ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ಮಾಹಿತಿ ಪಡೆದಿದ್ದು, ಸಿದ್ದರಾಮಯ್ಯ ಅವರು ನಾನು ಮಾತುಕತೆ ನಡೆಸಿ ಮನವೊಲಿಸುತ್ತೇನೆಂದು ಹೇಳಿದ್ದಾರೆ ಎಂದು ಹೇಳಲಾಗಿದೆ.