Advertisement
ಬೆಂಗಳೂರು ರಕ್ಷೆಗೆ ಯಾತ್ರೆಬೆಂಗಳೂರು: ಚುನಾವಣಾ ಸಿದ್ಧತೆಯಲ್ಲಿರುವ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ವಿರುದ್ಧನೇರವಾಗಿಯೇ ಪಾದಯಾತ್ರೆ ಹೋರಾಟಕ್ಕಳಿದಿದೆ.
Related Articles
Advertisement
ಪಾದಯಾತ್ರೆಯುದ್ದಕ್ಕೂ ರಸ್ತೆ ಬದಿಯ ಅಂಗಡಿ, ಮನೆಗಳಿಗೆ ತೆರಳಿದ ಪ್ರಕಾಶ್ ಜಾವಡೇಕರ್ ಮತ್ತಿತರರು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಆಡಳಿತದ ವಿರುದ್ಧ ಜಾಗೃತಿ ಮೂಡಿಸುವ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏನೇನು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಮಾಹಿತಿ ಇರುವ ಕರಪತ್ರಗಳು ಹಾಗೂ ಗುರುವಾರ ಬಿಡುಗಡೆ ಮಾಡಿದ್ದ ಸರ್ಕಾರದ ವಿರುದ್ಧದ ಆರೋಪ ಪಟ್ಟಿಗಳನ್ನು ವಿತರಿಸಿದರು.
ಸದಾ ಸಿದ್ಧ ಅಲ್ಲ, ಕೂತಲ್ಲೇ ನಿದ್ದೆ ಸರ್ಕಾರ:ರಾಜ್ಯ ಸರ್ಕಾರದ ಸದಾ ಸಿದ್ಧ ಘೋಷಣೆ ಬಗ್ಗೆ ವ್ಯಂಗ್ಯವಾಡಿದ ಪ್ರಕಾಶ್ ಜಾವಡೇಕರ್ ಮತ್ತು ಅನಂತಕುಮಾರ್, ಇದು ಸದಾ ಸಿದ್ಧ ಸರ್ಕಾರವಲ್ಲ, ಕೂತಲ್ಲೇ ನಿದ್ದೆ ಸರ್ಕಾರ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಶಾಸಕರ ಪುತ್ರ, ಆಪ್ತರು ಸೇರಿದಂತೆ ಕಾಂಗ್ರೆಸ್ ಮುಖಂಡರಿಂದಲೇ ಜನಸಾಮಾನ್ಯರ ಮೇಲೆ ದೌರ್ಜನ್ಯ, ಹಲ್ಲೆ ನಡೆಯುತ್ತಿದೆ. ಪೊಲೀಸರು ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಸರ್ಕಾರವೇ ಆರೋಪಿಗಳಿಗೆ ರಕ್ಷಣೆ ನೀಡುತ್ತಿದೆ. ಹಾಡ ಹಗಲೇ ಕೊಲೆಗಳು ನಡೆಯುತ್ತಿವೆ. ಇನ್ನೊಂದೆಡೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮೂಲ ಸೌಕರ್ಯ ಕೊರತೆ ಕಾಡುತ್ತಿದ್ದು, ಸಂಚಾರ ಸಮಸ್ಯೆ, ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಧಿಕ್ಕಾರ ಕೂಗಿದರು. ಸಿದ್ದ-ಬಿದ್ದ ಘೋಷಣೆಗಳನ್ನು ಹಾಕಿದರು. ಬೆಳಗ್ಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ನಡೆದರೆ ಸಂಜೆ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಫರ್ಜಿ ಕೆಫೆ ಇರುವ ಯುಬಿ ಸಿಟಿ ಬಳಿಯಿಂದ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಶನಿವಾರದಿಂದ ಆರ್ ಅಶೋಕ್ ನೇತೃ ತ್ವದಲ್ಲಿ ಇತರೆ ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಮುಂದುವರಿಯಲಿದ್ದು, ಮಾ. 15ರಂದು ಬೃಹತ್ ಸಮಾವೇಶದ ಮೂಲಕ ತೆರೆ ಬೀಳಲಿದೆ. ರಾಜ್ಯಾದ್ಯಂತ ಪಾದಯಾತ್ರೆ?:
ಈ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ಆರಂಭವಾಗಿರುವ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಪಟ್ಟಿ ಹಂಚುವುದರೊಂದಿಗೆ, ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆ, ಬಿಜೆಪಿ ಈ ಹಿಂದೆ ರಾಜ್ಯದಲ್ಲಿದ್ದಾಗ ಕೈಗೊಂಡ ಯೋಜನೆಗಳನ್ನು ಜನರಿಗೆ ತಲುಪಿಸಲು ಮುಂದಾಗಿದೆ. ಅದರಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳು ಸೇರಿದಂತೆ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಪಟ್ಟಿ ಹಂಚಲು ಚಿಂತನೆ ನಡೆಸಲಾಗಿದೆ. ಭಾನುವಾರ (ಮಾ.4) ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ದಾಖಲೆಗಳ ತಿರುಗೇಟು
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ದಾಖಲೆಗಳ ಬಿಡುಗಡೆ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರತಿ ದಿನ ಒಬ್ಬೊಬ್ಬ ಸಚಿವರ ಮೂಲಕ ದಾಖಲೆ ಬಿಡುಗಡೆಗೊಳಿಸಲು ಮುಂದಾಗಿದೆ. ಬಿಜೆಪಿಯ “ಬೆಂಗಳೂರು ಉಳಿಸಿ’ ಪಾದಯಾತ್ರೆಗೆ ಪ್ರತ್ಯುತ್ತರ ನೀಡಲು ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದಿದ್ದ ಅವ್ಯವಹಾರಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಹೋರಾಟ ಮಾಡಲು ನಿರ್ಧರಿಸಿದೆ. ಬಿಜೆಪಿಯ ಚಾರ್ಜ್‌ಶೀಟ್ ವಿರುದ್ಧ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ವೇಸ್ಟ್ ಬಂಡಲ್, ಕಸದ ಡಬ್ಬಿಗೂ ಹಾಕಲು ಲಾಯಕ್ ಇಲ್ಲಾ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಇರುವುದರಿಂದ ಬಿಜೆಪಿ ನಾಯಕರು ಚುನಾವಣೆ ಮುಂದೂಡಲು ಯೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬೆಂಗಳೂರು ನಗರಾಭಿವೃದ್ಧಿ ಕೆ.ಜೆ. ಜಾರ್ಜ್ ಹೇಳಿದ್ದಾರೆ.