ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸಂಸ್ಥಾಪಕ ಕೆ. ಚಂದ್ರಶೇಖರ ರಾವ್ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತುಗಳನ್ನೇಕೆ ಆಡುತ್ತಿಲ್ಲ ಎನ್ನುವುದು ಕದನ ಕುತೂಹಲದ ವಿಚಾರವಾಗಿ ಮಾರ್ಪಾಡಾಗಿದೆ.
ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ 115 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತುಗಳನ್ನೇ ಆಡದೆ ಇದ್ದದ್ದು ಪ್ರಧಾನ ಅಂಶವಾಗಿದೆ.
ಅಂದ ಹಾಗೆ ಇದು ಮೊದಲ ಬಾರಿಯೇನೂ ಅಲ್ಲ. ಅವಕಾಶ ಸಿಕ್ಕಿದರೆ ಪ್ರಧಾನಿ ಹುದ್ದೆಗೆ ಏರಬೇಕು ಎಂಬ ಮಹತ್ವಾಕಾಂಕ್ಷೆ ಇರುವ ತೆಲಂಗಾಣ ಮುಖ್ಯಮಂತ್ರಿ ಕರ್ನಾಟಕದ ಚುನಾವಣ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಕೂಡ ಅದರ ಬಗ್ಗೆ ಪ್ರತಿಕ್ರಿಯೆ ನೀಡಲೇ ಇಲ್ಲ. ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ದಿಲ್ಲಿ ಅಬಕಾರಿ ಹಗರಣದಲ್ಲಿ ಎಂಎಲ್‌ಸಿ ಕೆ. ಕವಿತಾ ವಿರುದ್ಧ ವಿಚಾರಣೆ ನಡೆಸಿರುವಂತೆಯೇ ಚಂದ್ರಶೇಖರ ರಾವ್ ಹೊಸದಿಲ್ಲಿಗೆ ದೌಡಾಯಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಮೈತ್ರಿಕೂಟ ರಚನೆ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಓಡಾಡುತ್ತಿರುವ ಕೆಸಿಆರ್ ಎರಡು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ತೆಲಂಗಾಣದಲ್ಲಿ ನಡೆದಿದ್ದ ಕಾರ್ಯಕ್ರಮಗಳಿಂದ ದೂರ ಇದ್ದದ್ದು ಗಮನಾರ್ಹ.
ಕಳೆದ ವರ್ಷದ ಮೇ 26ರಂದು ಪ್ರಧಾನಿ ತೆಲಂಗಾಣಕ್ಕೆ ಭೇಟಿ ನೀಡಿದ್ದ ವೇಳೆ ಚಂದ್ರಶೇಖರ ರಾವ್ ಬೆಂಗಳೂರಿಗೆ ಆಗಮಿಸಿ, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿದ್ದರು.
ಬಿಆರ್‌ಎಸ್‌ನ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬಗ್ಗೆ ಎಂಎಲ್‌ಸಿ ಕೆ. ಕವಿತಾ ಟ್ವೀಟ್ ಮಾಡಿದ್ದರು. ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಕಾಂಗ್ರೆಸ್ ನಾಯಕ ರೇವಂತ ರೆಡ್ಡಿ “ಬಿಆರ್‌ಎಸ್ ಬಿಜೆಪಿಯ ಬಿ ಟೀಂ’ ಎಂದು ಟೀಕಿಸಿದ್ದರು.
ಜೂನ್‌ನಲ್ಲಿ ನಡೆದಿದ್ದ 3 ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೆಲಂಗಾಣ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿರಲಿಲ್ಲ. ಅದಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯೆ ನೀಡಿ, ಕೆಸಿಆರ್ ಅವರ ಪಕ್ಷ ಬಿಜೆಪಿ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ವಿರುದ್ಧ ಕೆ. ಚಂದ್ರಶೇಖರ ರಾವ್ ಇದ್ದಕ್ಕಿದ್ದಂತೆ ಮೌನವಾದದ್ದು ಏಕೆ ಇನ್ನೂ ಅರ್ಥವಾಗುತ್ತಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.