Advertisement
ಅಧಿಕಾರಕ್ಕೇರಲು ಬಿಡಬೇಡಿ: ಅಜ್ಮಿರ್‌ನಲ್ಲಿ ಶನಿವಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಮತಬ್ಯಾಂಕ್ ರಾಜಕಾರಣವು ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಇದು ಈಗ ಕೇವಲ ಚುನಾವಣೆಗೆ ಸೀಮಿತವಾಗಿಲ್ಲ. ವೋಟ್‌ಬ್ಯಾಂಕ್ ರಾಜಕಾರಣ ಮಾಡುವಂಥ ಪಕ್ಷಗಳು ತಾವು ಅಧಿಕಾರದಲ್ಲಿರುವಾಗ ಅಧಿಕಾರಶಾಹಿಯನ್ನು ವಿಭಜಿಸುತ್ತವೆ. ಇದರಿಂದಾಗಿ ಆಡಳಿತಯಂತ್ರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ, ಅಭಿವೃದ್ಧಿ ಕುಂಠಿತವಾಗುತ್ತದೆ. ಈ ರೀತಿಯ ರಾಜಕೀಯ ಮಾಡುವ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೇರಲು ಬಿಡಬೇಡಿ’ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಕೀಳುಮಟ್ಟದ ರಾಜಕಾರಣ ಮಾಡುತ್ತಾರೆ. ಸರ್ಜಿಕಲ್ ದಾಳಿಯನ್ನೂ ಪ್ರಶ್ನಿಸುವ ಮೂಲಕ ಸೇನೆಗೆ ಅವಮಾನ ಮಾಡುತ್ತಾರೆ ಎಂದೂ ಪ್ರಧಾನಿ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. “ನಮ್ಮದು ಬಡವರು, ರೈತರ ಪರವಿರುವ ಪಕ್ಷ. ಆಡಳಿತಾರೂಢ ಬಿಜೆಪಿ ಕೇವಲ ಶ್ರೀಮಂತರ ಹಿತಾಸಕ್ತಿಯಷ್ಟೇ ಹೊಂದಿರುವ ಪಕ್ಷ’ ಎಂದಿದ್ದಾರೆ. ಶ್ರೀಮಂತರಿಗೆ ಸಹಾಯ ಮಾಡಬೇಕೆಂದು ಬಯಸಿದರೆ, ಮಾಡಿ. ಆದರೆ, ಅದಕ್ಕಾಗಿ ರೈತರು ಮತ್ತು ಬಡವರನ್ನು ಕಡೆಗಣಿಸಬೇಡಿ. ಶ್ರೀಮಂತರ 3 ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಲು ಸಾಧ್ಯವಿದೆ ಎಂದಾದರೆ, ಸಮಾಜದ ದುರ್ಬಲ ವರ್ಗದವರಿಗೇಕೆ ಇಂಥ ವಿನಾಯ್ತಿ ನೀಡಬಾರದು ಎಂದೂ ರಾಹುಲ್ ಪ್ರಶ್ನಿಸಿದ್ದಾರೆ. ಆದಿವಾಸಿ ಏಕ್ತಾ ಪರಿಷತ್‌ನಲ್ಲಿ ಮಾತನಾಡಿದ ರಾಹುಲ್, ಬುಡಕಟ್ಟು ಮಸೂದೆಯು ಸರಕಾರ ನಿಮಗೆ ಕೊಡುವ ಉಡುಗೊರೆಯಲ್ಲ, ಅದು ನಿಮ್ಮ ಹಕ್ಕು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ, ಬುಡಕಟ್ಟು ಹಕ್ಕುಗಳ ಮಸೂದೆಯನ್ನು ಅನುಷ್ಠಾನ ಮಾಡುತ್ತೇವೆ ಎಂದೂ ಭರವಸೆ ನೀಡಿದ್ದಾರೆ. ಇದೇ ವೇಳೆ, ರಫೇಲ್ ಡೀಲ್ ಅನ್ನು ಎಚ್‌ಎಎಲ್‌ಗೆ ನೀಡಿದ್ದರೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆ, ಪ್ರಧಾನಿ ಅದನ್ನು ಅನಿಲ್ ಅಂಬಾನಿಯ ಕಂಪನಿಗೆ ಕೊಟ್ಟರು ಎಂದೂ ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ಅಖೀಲೇಶ್ ಶಾಕ್?
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಘೋಷಿಸಿದ ಬೆನ್ನಲ್ಲೇ ಈಗ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಕೂಡ ಕಾಂಗ್ರೆಸ್‌ಗೆ ಕೈ ಕೊಡುವ ಬಗ್ಗೆ ಸುಳಿವು ನೀಡಿದ್ದಾರೆ. ಮಧ್ಯಪ್ರದೇಶ ಚುನಾವಣಾ ಮೈತ್ರಿ ಕುರಿತ ಪ್ರಶ್ನೆಗೆ ಶನಿವಾರ ಉತ್ತರಿಸಿರುವ ಅಖೀಲೇಶ್, “ನಾವು ಕಾಂಗ್ರೆಸ್‌ಗಾಗಿ ಬಹಳ ದಿನ ಕಾದೆವು. ಇನ್ನೂ ಎಷ್ಟು ದಿನ ಕಾಯಲು ಸಾಧ್ಯ? ಹಾಗಾಗಿ ನಾವೀಗ ಬಿಎಸ್‌ಪಿ ಹಾಗೂ ಗೊಂಡ್ವಾನ ಗಣತಂತ್ರ ಪಾರ್ಟಿ(ಜಿಪಿಪಿ) ಜತೆ ಮೈತ್ರಿ ಮಾತುಕತೆ ನಡೆಸಲು ಮುಂದಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೃದಯ ವೈಶಾಲ್ಯತೆ ಮೆರೆಯಬೇಕು ಮತ್ತು ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕು ಎಂದೂ ಸಲಹೆ ನೀಡಿದ್ದಾರೆ.
Related Articles
ಅಜ್ಮಿರ್ ರ್ಯಾಲಿಯಲ್ಲಿ ರಾಜಸ್ಥಾನ ಸಿಎಂ ವಸುಂಧರಾ ರಾಜೇ ಅವರು ಶನಿವಾರ ರೈತರಿಗೆ ಉಚಿತ ವಿದ್ಯುತ್ ಒದಗಿಸುವ ಆಶ್ವಾಸನೆ ನೀಡಿದ್ದಾರೆ. ಚುನಾವಣಾ ಆಯೋಗವು ದಿನಾಂಕ ಘೋಷಿಸುವ ಕೆಲವೇ ಕ್ಷಣ ಮೊದಲು ರಾಜೇ ಈ ಘೋಷಣೆ ಮಾಡಿದ್ದು, ಕಾಂಗ್ರೆಸ್ ಅಪಸ್ವರ ಎತ್ತಿದೆ. ಈ ರೀತಿಯ ಘೋಷಣೆ ಮಾಡಲು ಬಿಜೆಪಿಗೆ ಅವಕಾಶ ಕಲ್ಪಿಸಲೆಂದೇ ಚುನಾವಣಾ ಆಯೋಗ 12.30ಕ್ಕೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು 3 ಗಂಟೆಗೆ ಮುಂದೂಡಿತು. ಬಿಜೆಪಿ ಸೂಪರ್ ಚುನಾವಣಾ ಆಯೋಗದ ರೀತಿ ವರ್ತಿಸುತ್ತಿದೆ. ರೈತರಿಗೆ ಉಚಿತ ವಿದ್ಯುತ್ ನೀಡಬೇಕೆಂದು 5 ವರ್ಷಗಳಲ್ಲಿ ಬಿಜೆಪಿಗೆ ಹೊಳೆದಿಲ್ಲವೇ ಎಂದು ಕಾಂಗ್ರೆಸ್ ವಕ್ತಾರ ಸುಜೇìವಾಲಾ ಪ್ರಶ್ನಿಸಿದ್ದಾರೆ.
Advertisement
ರಾಹುಲ್ ಅವರೇ, ಪ್ರಧಾನಿ ಮೋದಿ ಅವರ ಸಾಧನೆಯ ಬಗ್ಗೆ ಪ್ರಶ್ನಿಸುವ ಬದಲು, ನಿಮ್ಮ ಕುಟುಂಬದ 4 ತಲೆಮಾರು ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ಕೊಡಿ.ಅಮಿತ್ ಶಾ, ಬಿಜೆಪಿ ಅಧ್ಯಕ್ಷ