Advertisement

Assembly Election ಯಾವುದೇ ಕ್ಷಣದಲ್ಲಿ ಬರಲಿದೆ, ಕಾರ್ಯಕರ್ತರು ಸಿದ್ದರಾಗಿರಿ: ವಿಜಯೇಂದ್ರ

05:37 PM Dec 30, 2023 | Team Udayavani |

ವಿಜಯಪುರ: ದಣಿವರಿಯದೆ ದೇಶಕ್ಕಾಗಿ ದುಡಿಯುತ್ತಿರುವ ವಿಶ್ವ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಕಾರ್ಯಕರ್ತರು ಸನ್ನದ್ಧರಾಗಿಬೇಕು ಎಂದು ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದರು.

Advertisement

ಶನಿವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶನಿವಾರ ನಗರಕ್ಕೆ ಆಗಮಿಸಿದ್ದ ತಮಗೆ ವಿಜಯಪುರ ಜಿಲ್ಲಾ ಘಟಕ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಛತ್ತೀಸಘಡ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಬೂಟಾಟಿಕೆ ಬಯಲು ಮಾಡಿರುವ ಅಲ್ಲಿನ ಮತದಾರ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

ವಿಶ್ವಕ್ಕೆ ನಾಯಕತ್ವ ವಹಿಸುವ ಶಕ್ತಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಮತ್ತೊಮ್ಮೆ ಪ್ರತಿಷ್ಠಾಪಿಸುವುದಷ್ಟೇ ನಮ್ಮ ಮುಂದಿರುವ ಗುರಿ. ಹೀಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯದ ನಾಯಕರು ಸೇರಿ ನನಗೆ ಪಕ್ಷ ಕಟ್ಟುವ ರಾಜ್ಯದ ಜವಾಬ್ದಾರಿ ನೀಡಿದ್ದು, ಸಮರ್ಥವಾಗಿ ನಿಭಾಯಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದೇನೆ. ಪಕ್ಷದ ಕಾರ್ಯಕರ್ತರು ಲೋಕಸಭೆ ಚುನವಣೆ ಮಾತ್ರ ಸಿದ್ಧತೆ ಮಾಡಿಕೊಳ್ಳದೆ, ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಅದಕ್ಕೂ ಈಗಿನಿಂದಲೇ ಒಗ್ಗಟ್ಟಿನಿಂದ ಕೆಲಸ ಮಾಡಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳು ಏನೇ ತಿಪ್ಪರಲಾಗ ಹಾಕಿದರೂ ಬಿಜೆಪಿ ನಾಗಾಲೋಟಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ. ರಾಜ್ಯದಲ್ಲೂ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕದಲ್ಲಿನ 28 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ ಜನರ ನೆರವಿಗೆ ಧಾವಿಸದೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸುಳ್ಳು ಹೇಳುವಲ್ಲಿ ನಿರತವಾಗಿದೆ. ರೈತರು ಬರದಿಂದ ತತ್ತರಿಸಿ ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕಾಂಗ್ರೆಸ್ ಸರ್ಕಾರದ ಮಂತ್ರಿ ಶಿವಾನಂದ ಪಾಟೀಲ ರೈತರು 5 ಲಕ್ಷ ರೂ. ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಿಂದಿಸುವ ಮಟ್ಟಕ್ಕೆ ರೈತ ವಿರೋಧ ನಿಲುವು ತಾಳುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ಧರಾಮಯ್ಯ ಸರ್ಕಾರ, ನೊಂದ ರೈತರ ಕಣ್ಣೀರುವ ಒರೆಸುವ, ಸ್ಪಂದನೆ ಮಾಡುವ ಬದಲು ಶೋಕಿ ಮಾಡುತ್ತಿದ್ದಾರೆ ಎಂದು ನಿಂದಿಸುವ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಭೀಕರ ಬರದ ಸಂದರ್ಭದಲ್ಲೂ ಐಷಾರಾಮಿ ವಿಮಾನದಲ್ಲಿ ಸಂಚರಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮತ್ತೊಂದೆಡೆ ಬಿಜೆಪಿ ಪಕ್ಷದ ನಾಯಕರು, ಕಾರ್ಯಕರ್ತರು ನಮ್ಮೊಳಗಿರುವ ಅಪಸ್ವರಗಳನ್ನೆಲ್ಲ ಮರೆತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವುದಕ್ಕಾಗಿ ಶ್ರಮಿಸಬೇಕಿದೆ ಎಂದು

ರೈತ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯಪುರ ಜಿಲ್ಲೆಗೂ ಅವಿನಾವಭಾವ ಬಾಂಧವ್ಯ ಇದೆ. ಹೀಗಾಗಿ ವಿಜಯಪುರ ಜಿಲ್ಲೆಯ ಜನತೆಯ ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇನೆ. ಪಕ್ಷ ಸಾಮಾನ್ಯ ಕಾರ್ಯಕರ್ತರನಾಗಿ ನಾನು ನಿಮ್ಮೊಂದಿಗೆ ಪಕ್ಷ ಕಟ್ಟುವಲ್ಲಿ ನಿಲ್ಲುತ್ತೇನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಸಂಸದರ ರಮೇಶ ಜಿಗಜಿಣಗಿ, ಮಾಜಿ ಸಚಿವರಾಧ ಮುರುಗೇಶ ನಿರಾಣಿ, ಎಸ್.ಕೆ.ಬೆಳ್ಳುಬ್ಬಿ, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಎಸ್.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರು, ಸೋಮನಗೌಡ ಪಾಟೀಲ, ಅರುಣ ಶಹಪುರ, ರುದ್ರಗೌಡ ಪಾಟೀಲ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಮ್ಮ ಜೋಗೂರು ಸೇರಿದಂತೆ ಇತರರು ವೇದಿಕ ಎಮೇಲೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next