ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ತೆಲಂಗಾಣದಲ್ಲಿ ಹಾಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಟಿಆರ್ ಎಸ್ 65 ಸ್ಥಾನ ಪಡೆದು ಮತ್ತೆ ಅಧಿಕಾರದ ಗದ್ದುಗೆ ಏರಿದೆ. ಮಿಜೋರಾಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದ್ದು(05 ಸ್ಥಾನ) ಮಿಜೋ ನ್ಯಾಶನಲ್ ಫ್ರಂಟ್ 26 ಸ್ಥಾನ ಪಡೆದು ಅಧಿಕಾರ ಪಡೆದಿದೆ.
ಛತ್ತೀಸ್ ಗಢದಲ್ಲಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್ ಪಕ್ಷ 63 ಸ್ಥಾನ ಪಡೆದು ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ. ಮಧ್ಯಪ್ರದೇಶದ ಫಲಿತಾಂಶದಲ್ಲಿ ಸಾಕಷ್ಟು ಏರಿಳಿತ ಕಂಡ ಮೇಲೆ ಇದೀಗ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಭಾರತೀಯ ಜನತಾ ಪಕ್ಷ ಪ್ರಬಲ ಪೈಪೋಟಿ ನೀಡಿಯೂ ಪರಾಜಯಗೊಳ್ಳುವ ಮೂಲಕ 15 ವರ್ಷಗಳ ಆಡಳಿತ ಕೊನೆಗೊಂಡಂತಾಗಿದೆ. ಕಾಂಗ್ರೆಸ್ 117 ಸ್ಥಾನ ಪಡೆದು ಸರಳ ಬಹುಮತದೊಂದಿಗೆ ಸರ್ಕಾರ ರಚಿಸುವ ಸಿದ್ಧತೆಯಲ್ಲಿದೆ.
ಏತನ್ಮಧ್ಯೆ ಬಿಎಸ್ಪಿ ಹಾಗೂ ಎಸ್ಪಿ ಪಕ್ಷ ಬೆಂಬಲ ನೀಡುವಂತೆ ಮಾಯಾವತಿ ಹಾಗೂ ಮುಲಾಯಂ ಜೊತೆ ವರಿಷ್ಠರು ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ವಿವರ ಇಲ್ಲಿದೆ.
*ರಾಜಸ್ಥಾನದಲ್ಲಿ ಕಾಂಗ್ರೆಸ್ 71, ಬಿಜೆಪಿ 49, ಪಕ್ಷೇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 3 ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ತೀವ್ರ ಹಿನ್ನಡೆ.
*ಮಧ್ಯಪ್ರದೇಶದಲ್ಲಿ ಬಿಜೆಪಿ 37, ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಮುನ್ನಡೆ, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮೇಲುಗೈ…
*ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿನ ನಾಗಾಲೋಟ, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ, ತೆಲಂಗಾಣದಲ್ಲಿ ಟಿಆರ್ ಎಸ್, ಕಾಂಗ್ರೆಸ್ ಮಧ್ಯೆ ಪೈಪೋಟಿ, ಮಿಜೋರಾಂನಲ್ಲಿ ಎಂಎನ್ ಎಫ್ ಮುನ್ನಡೆ.
*ಮಧ್ಯಪ್ರದೇಶದಲ್ಲಿ ಬಿಜೆಪಿ 24, ಕಾಂಗ್ರೆಸ್ 22 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
*ರಾಜಸ್ಥಾನದಲ್ಲಿ ಕಾಂಗ್ರೆಸ್ 54, ಭಾರತೀಯ ಜನತಾ ಪಕ್ಷ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಟಿಆರ್ ಎಸ್ 11, ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಪೈಪೋಟಿ ನಡೆದಿದೆ.
*ಮಿಜೋರಾಂನಲ್ಲಿ ಎಂಎನ್ ಎಫ್ 03 ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
*ತೆಲಂಗಾಣದಲ್ಲಿ ಟಿಆರ್ ಎಸ್ 11, ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶ ಬಿಜೆಪಿ 06, ಕಾಂಗ್ರೆಸ್ 04 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
*ಛತ್ತೀಗಢದಲ್ಲಿ ಬಿಜೆಪಿ 09, ಕಾಂಗ್ರೆಸ್ 11 ಸ್ಥಾನ ಪಡೆದು ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 04, ಬಿಜೆಪಿ 06 ಸ್ಥಾನದಲ್ಲಿ ಮುನ್ನಡೆ ಪಡೆದಿದೆ.
*ಛತ್ತೀಸ್ ಗಢದಲ್ಲಿ ಕಾಂಗ್ರೆಸ್ 5, ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪ್ರಬಲ ಪೈಪೋಟಿ ನಡೆದಿದೆ.
*ರಾಜಸ್ಥಾನದಲ್ಲಿ ಕಾಂಗ್ರೆಸ್ 5, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಮೂರು ಕ್ಷೇತ್ರಗಳಲ್ಲಿ ಟಿಆರ್ ಎಸ್ ಮುನ್ನಡೆ
*5 ರಾಜ್ಯಗಳ ಮತ ಎಣಿಕೆ ಪ್ರಕ್ರಿಯೆ ಆರಂಭ, ಮೊದಲಿಗೆ ಅಂಚೆ ಮತ ಎಣಿಕೆ ಆರಂಭವಾಗಿದ್ದು, ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟ ಫಲಿತಾಂಶ ಮಧ್ಯಾಹ್ನದ ವೇಳೆಗೆ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ.
*ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ್, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯ ವಿಧಾನಸಭೆಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು.
*ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಹಾಗೂ ಟಿಆರ್ ಎಸ್(ತೆಲಂಗಾಣ ರಾಷ್ಟ್ರ ಸಮಿತಿ) ಅಧಿಕಾರ ಹೊಂದಿರುವ ತೆಲಂಗಾಣ, ಕಾಂಗ್ರೆಸ್ ವಶದಲ್ಲಿರುವ ಮಿಜೋರಾಂ ಯಾರ ತೆಕ್ಕೆಗೆ ಸೇರಲಿದೆ ಎಂಬುದು ಮತಎಣಿಕೆ ನಂತರ ಬಹಿರಂಗವಾಗಲಿದೆ.