Advertisement

Assembly: ಕಲಾಪ ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕಲ್ಲ: ಸ್ಪೀಕರ್‌ ಖಾದರ್‌

12:14 AM Jul 30, 2024 | Team Udayavani |

ಮಂಗಳೂರು: ಮುಡಾ ಹಗರಣ ವಿಚಾರದಲ್ಲಿ ಆಡಳಿತ-ವಿಪಕ್ಷಗಳ ವಾದ- ಪ್ರತಿವಾದ ಆಲಿಸಿಯೇ ರೂಲಿಂಗ್‌ ನೀಡಿದ್ದೇನೆ. ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ ನಡೆಯಬೇಕೇ ಹೊರತು ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ ಮತ್ತು ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕುವುದಕ್ಕೆ ನಾನೂ ಸಿದ್ಧನಿಲ್ಲ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಮುಡಾ ವಿಚಾರದಲ್ಲಿ ಕಲಾಪದಲ್ಲಿ ಚರ್ಚೆಗೆ ಆಸ್ಪದ ನೀಡಿಲ್ಲ ಎಂದು ವಿಪಕ್ಷಗಳ ಆರೋಪದ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿದ ನಿಲುವಳಿ ಸೂಚನೆಗೆ ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 62(7)ರ ಪ್ರಕಾರ “ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿ ಇರಬಾರದು’ ಎಂದು ಹೇಳುತ್ತದೆ.

ಸರಕಾರ ಚರ್ಚೆಗೆ ಸಿದ್ಧವಿದ್ದರೂ, ಇಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ? ನಿಯಮ ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ. ಅದು ಮುಂದುವರಿಯಬಾರದು ಎಂದು ಚರ್ಚೆಗೆ ಆಸ್ಪದ ನೀಡಿಲ್ಲ. ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ಶಾಸಕರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು ಹಾಕಬಾರದು ಎಂದರು.

ಕಲಾಪ ಮೇಲೆ “ಎಐ’ ನಿಗಾ
ವಿಧಾನಸಭೆಯ ಕಡತ ಸಹಿತ ಎಲ್ಲವನ್ನೂ ಡಿಜಿಟಲೀಕರಣಗೊಳಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಐಟಿ ಸಹಿತ ವಿವಿಧ ತಜ್ಞರ ಸಮಿತಿ ರಚಿಸಲಾಗಿದೆ. ಕಲಾಪಕ್ಕೆ ಹಾಜರಾಗುವ-ನಿರ್ಗಮಿಸುವ ಸಮಯವನ್ನು ಇನ್ನು ಪೂರ್ಣವಾಗಿ ಕಂಡುಕೊಳ್ಳಲು ಸಾಧ್ಯ. ಅದಕ್ಕಾಗಿ ಎಐ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಯು.ಟಿ. ಖಾದರ್‌ ತಿಳಿಸಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ನೀಟ್‌ ಬಗ್ಗೆ ಕಾದು ನೋಡೋಣ
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ.ಖಾದರ್‌ “ದೇಶದಲ್ಲೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ಜಾರಿಗೊಳಿಸಿದ್ದು ಕರ್ನಾಟಕ. ಈಗ ನೀಟ್‌ ಪರೀಕ್ಷೆ ಗೊಂದಲ ಹುಟ್ಟುಹಾಕಿದ್ದು, ಇದಕ್ಕೆ ಪರ್ಯಾಯವಾಗಿ ಕರ್ನಾಟಕದಲ್ಲೇ ನೀಟ್‌ ಪರೀಕ್ಷೆ ಬಗ್ಗೆ ಸರಕಾರ ನಿರ್ಣಯ ಕೈಗೊಂಡಿದೆ. ಸರಕಾರ ಈಗಾಗಲೇ ನೀಟ್‌ ಬಗ್ಗೆ ಕೈಗೊಂಡ ನಿರ್ಣಯದ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ಕಳುಹಿಸಿದೆ. ಕೇಂದ್ರ ಸರಕಾರ ಯಾವ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next