Advertisement

ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

08:59 PM Jun 01, 2019 | Team Udayavani |

ಚಿಕ್ಕಬಳ್ಳಾಪುರ: ತಂಬಾಕು ಪದಾರ್ಥಗಳನ್ನು ಜನತೆ ಸೇವನೆ ಮಾಡುತ್ತಿರುವುದರಿಂದ ಅನೇಕ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದು, ತಂಬಾಕು ಉತ್ಪನ್ನ ನಿಷೇಧ ಮಾಡಿ ತಂಬಾಕು ರಹಿತ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಹೆಚ್‌. ಕೋರಡ್ಡಿ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ‌ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ 10 ಲಕ್ಷ ಮಂದಿ ಬಲಿ: ತಂಬಾಕು ಮನುಷ್ಯನ ಜೀವನಕ್ಕೆ ಅಪಾಯವೆಂದು ತಿಳಿದಿದ್ದರೂ ಅದ‌ರ ಚಟಕ್ಕೆ ಬಿದ್ದು, ಯುವ ಜನತೆ ಹಾಳಾಗುತ್ತಿದ್ದು, ಪ್ರತಿಯೊಬ್ಬರು ತಂಬಾಕಿನಿಂದ ದೂರವಿರಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತಂಬಾಕು ಉತ್ಪನ್ನಗಳು ದುಬಾರಿ ಬೆಲೆಗೆ ಏರಿಸಿದರೂ ಕೂಡ ಉಪಯೋಗಿಸುವರ ಸಂಖ್ಯೆ ಕಡಿಮೆಯಾಗಿಲ್ಲ.

ದುಬಾರಿ ಬೆಲೆ ನಿಗದಿ ಮಾಡಿದರೆ ತಂಬಾಕು ಉತ್ಪನ್ನಗಳ ಸೇವನೆ ಮಾಡುವವರು ಕಡಿಮೆಯಾಗುತ್ತಾರೆಂದು ಸರ್ಕಾರದ ಉದ್ದೇಶ ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಂತ ಹಂತವಾಗಿ ತಂಬಾಕು ಸೇವನೆ ಕಡಿಮೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕಿದ್ದು, ಪ್ರತಿ ವರ್ಷ 10 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸಂಬಂಧ ರೋಗಗಳಿಂದ ಸಾವನ್ನಾಪ್ಪುತ್ತಿದ್ದಾರೆ ಎಂದರು.

ಅರಿವು ಮೂಡಿಸಲು ಆಚರಣೆ: ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ತಂಬಾಕು, ಧೂಮಪಾನದಂತಹ ಮಾರಕ ಚಟಗಳು ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

Advertisement

ಅಮೂಲ್ಯ ಜೀವನ ಹಾಳು: ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕೆ.ಎನ್‌.ರೂಪ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಕಠಿಣ ಕಾನೂನು ಜಾರಿಯಾದಾಗ ಮಾತ್ರ ತಂಬಾಕು ಉತ್ಪನ್ನಗಳನ್ನು ನಿಯಂತ್ರಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ತಂಬಾಕು ಸೇವನೆಯನ್ನು ಚಟವಾಗಿ ರೂಪಿಸಿಕೊಂಡಿದ್ದು ತಂಬಾಕು ಉತ್ಪನ್ನಗಳಾದ ಧೂಮಪಾನ ಗುಟ್ಕಾ ಸೇವನೆಯಿಂದ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶೇ.100 ರಷ್ಟು ತಂಬಾಕು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಅಂಗಾಂಗಗಳಿಗೆ ಅಪಾಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಬಿ.ಎಂ.ರವಿಶಂಕರ್‌ ಮಾತನಾಡಿ, ದೇಹದಲ್ಲಿ ಅಂತ್ಯಂತ ದೊಡ್ಡದಾದ ಅಂಗವಾಗಿರುವ ರಕ್ತನಾಳದ ಒಳಗಿರುವ ಜೀವಕೋಶಗಳ ಮೇಲೆ ತಂಬಾಕು ಉತ್ಪನ್ನಗಳಲ್ಲಿರುವ ಅಪಾಯಕಾರಿ ನಿಕೋಟಿನ್‌ ಪರಿಣಾಮ ಬೀರುತ್ತದೆ. ಕೇವಲ ಹೃದಯ ಭಾಗವಲ್ಲದೇ, ಶರೀರದ ಇತರೆ ಅಂಗಾಂಗಳಿಗೆ ಅಪಾಯವನ್ನುಂಟು ಮಾಡುತ್ತದೆ.

ಇಂತಹ ಅಪಾಯಕಾರಿ ಚಟಕ್ಕೆ ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಮುಂದಿನ ಯುವ ಪೀಳಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ವಿಜಯ್‌ ಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ವಿರಶಂಕರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ಬಾಬುರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಮಹೇಶ್‌ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ: ನಾವು ಹಾಗೂ ನಮ್ಮ ಸಮಾಜ ಆರೋಗ್ಯವಂತವಾಗಿರಲು ತಂಬಾಕು ಉತ್ಪನ್ನಗಳ ಸೇವನೆ ಮಾಡುವುದಿಲ್ಲ ಎಂದು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಧೀಶರು, ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸಹಿ ಸಂಗ್ರಹ ಅಭಿಯಾನದಲ್ಲಿ ಸಹಿ ಮಾಡಿದರು. ಮೊದಲಿಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಹೆಚ್‌.ಕೋರಡ್ಡಿ ಸಹಿ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.

ಚಿಕ್ಕ ವಯಸ್ಸಿನಿಂದಲೇ ಮಕ್ಕಳು ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ಒಳಗಾಗದಂತೆ ಪೋಷಕರು ನೋಡಿಕೊಳ್ಳಬೇಕು. ಮೋಜಿಗಾಗಿ ಸಹಸ್ರಾರು ಮಂದಿ ತಂಬಾಕು ಉತ್ಪನ್ನಗಳನ್ನು ಸೇವಿಸಿ ಸಾವಿಗೆ ಆಹ್ವಾನ ನೀಡುತ್ತಿದ್ದಾರೆ. ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿದೆ. ಬೀಡಿ, ಸಿಗರೇಟ್‌, ಗುಟ್ಕಾ, ಜರ್ದಾ ಇವೆಲ್ಲವೂ ಮಾನವ ಕುಲದ ಬಹುದೊಡ್ಡ ವೈರಿಗಳು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಜಾಗೃತಿಯಾಗಬೇಕಿದೆ.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ಪ್ರಧಾನ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next