ಬೆಂಗಳೂರು: “ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ನನ್ನ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿದೆ’ ಎಂದು ಮಹಿಳಾ ಟೆಕಿಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉತ್ತರ ಭಾರತ ಮೂಲದ 26 ವರ್ಷದ ಟೆಕಿ ನೀಡಿದ ದೂರಿನ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಆಕೆ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ ಎಂಬುದು ಗೊತ್ತಾಗಿದೆ. ಮತ್ತೂಂದೆಡೆ ತಾಂತ್ರಿಕ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೂರುದಾರ ಟೆಕಿ ನಗರದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಡಿ.12ರಂದು ರಾತ್ರಿ 8.30ಕ್ಕೆ ಕೋರಮಂಗಲದ ಪಬ್‌ಗ ಹೋಗಿದ್ದು, ತಡರಾತ್ರಿ 11.30ರವರೆಗೂ ಪಬ್‌ನಲ್ಲಿಯೇ ಸಮಯ ಕಳೆದಿದ್ದೇನೆ. ಆ ಬಳಿಕ ತಡರಾತ್ರಿ 12.30ಕ್ಕೆ ತನಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ನಲ್ಲಿ ಇದ್ದೆ. ಬಳಿಕ ಮನೆಯೊಂದರ ಬಾಗಿಲು ಬಡಿದು ಸಹಾಯ ಕೇಳಿದೆ. ಈ ವೇಳೆ ಸ್ಥಳೀಯರು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆಗ ಹೋಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ತನ್ನನ್ನು ರಕ್ಷಿಸಿ ಕೋರಮಂಗಲ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಪಬ್ ಅಥವಾ ದೇವೇಗೌಡ ಲೇಔಟ್‌ನಲ್ಲಿ ತಡರಾತ್ರಿ 11.30ರಿಂದ 12.30ರವರೆಗೆ ನನಗೆ ಏನಾಯಿತು ಎಂಬುದು ಗೊತ್ತಿಲ್ಲ. ಈ ಸಮಯದಲ್ಲಿ ಪ್ರಜ್ಞಾಹೀನಾಳಾಗಿದ್ದರಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯಿದೆ ಎಂದು ಆಕೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸಮಯ ಹೊಂದಾಣಿಕೆ ಇಲ್ಲ: ಮತ್ತೂಂದೆಡೆ ಟೆಕಿ ಯುವತಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದು, ಆಕೆ ಹೇಳುವ ಪ್ರಕಾರ ಅಂದು ರಾತ್ರಿ 11.30ರಿಂದ 12.30ರ ನಡುವೆ ನನಗೆ ಪ್ರಜ್ಞೆ ಇರಲಿಲ್ಲ. ಈ ಅವಧಿಯಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಕೆ ಹೇಳುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಕೆಲ ಸಾಕ್ಷ್ಯಗಳು ಸಿಕ್ಕಿವೆ. ಆದರೆ, ತಾಂತ್ರಿಕ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.