Advertisement

ದನ ಸಾಗಾಟ ಶಂಕೆಯಲ್ಲಿ ಮಾವಿನ ಹಣ್ಣಿನ ವಾಹನ ತಡೆದು ಹಲ್ಲೆ: ಓರ್ವ ಆಸ್ಪತ್ರೆಗೆ ದಾಖಲು

09:49 AM Jul 08, 2019 | Team Udayavani |

ಮಂಗಳೂರು: ಜಾನುವಾರು ಸಾಗಿಸಲಾಗುತ್ತಿದೆ ಎಂದು ತಪ್ಪಾಗಿ ಭಾವಿಸಿ ಮಾವಿನ ಹಣ್ಣು ಸಾಗಾಟದ ವಾಹನವನ್ನು ತಡೆದು, ಅದರಲ್ಲಿದ್ದವರಿಗೆ ಹಲ್ಲೆ ನಡೆಸಿದ ಘಟನೆ ನಗರದ ಕುಲಶೇಖರ ಚೌಕಿ ಬಳಿ ರವಿವಾರ ಮುಂಜಾನೆ ಸಂಭವಿಸಿದೆ.

Advertisement

ಗಾಯಗೊಂಡ ಉಮರ್‌ ಫಾರೂಕ್‌ (35) ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ
ರವಿವಾರ ಮುಂಜಾನೆ 4 ಗಂಟೆಗೆ ಉಮರ್‌ ಫಾರೂಕ್‌, ಅಶಕ್‌ ಮತ್ತು ಲತೀಫ್‌ ಅವರು 407 ಟೆಂಪೋದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ಗಳನ್ನು ತುಂಬಿಸಿ ಉಳಾಯಿಬೆಟ್ಟಿನಿಂದ ಮಂಗಳೂರು ಮಾರ್ಕೆಟ್‌ ಕಡೆಗೆ ತೆರಳುತ್ತಿದ್ದರು. ಆಗ ಮೂವರು ದುಷ್ಕರ್ಮಿಗಳು ಅಕ್ರಮವಾಗಿ ದನ ಸಾಗಿಸುತ್ತಿದ್ದಾರೆಂದು ಶಂಕಿಸಿ ವಾಹನವನ್ನು ಬೆನ್ನಟ್ಟಿದ್ದರು. ವಾಹನದಲ್ಲಿದ್ದವರು ಮಾವಿನ ಹಣ್ಣು ಎಂದು ಹೇಳಿದರೂ ಕೇಳದೆ ವಾಹನಕ್ಕೆ ತಡೆ ಒಡ್ಡಿದ್ದರು. ಈ ಸಂದರ್ಭ ಚಾಲಕ ಸಹಿತ ಇಬ್ಬರು ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದು, ಟೆಂಪೋದಲ್ಲಿದ್ದ ಫಾರೂಕ್‌ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಅಲ್ಲದೆ 70,000 ರೂ. ಅನ್ನು ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಟೆಂಪೋ ಕೊಂಡೊಯ್ದರು
ಹಲ್ಲೆಯ ಬಳಿಕ ದುಷ್ಕರ್ಮಿಗಳು 407 ಟೆಂಪೋವನ್ನು ಕುಲಶೇಖರ ಚೌಕಿಯಿಂದ ಕುಲಶೇಖರ ಚರ್ಚ್‌ ಸಮೀಪ ಕೊಂಡೊಯ್ದು ನಿಲ್ಲಿಸಿದ್ದಾರೆ. ಟೆಂಪೋದಲ್ಲಿ ಮಾವಿನ ಹಣ್ಣು ಕೊಂಡೊಯ್ಯುತ್ತಿದ್ದವರ ಮೊಬೈಲ್‌ ದೊರಕಿದೆ.

ಆರೋಪಿಗಳಿಗೆ ಶೋಧ
ಹಲ್ಲೆ ನಡೆಸಿದವರು ಯಾರೆಂದು ತಿಳಿದು ಬಂದಿಲ್ಲ. ಸಿಸಿಕೆಮರಾದಲ್ಲಿ ಚಹರೆ ಪತ್ತೆಯಾಗಿದ್ದು, ಅವರಿಗೆ ಶೋಧ ನಡೆಯುತ್ತಿದೆ.

Advertisement

ಜನ ಜಮಾಯಿಸಿದರು
ಮಾವಿನ ಹಣ್ಣು ಕೊಂಡೊಯ್ಯುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಕುಲಶೇಖರ ಚೌಕಿ ಬಳಿ ಜನ ಜಮಾಯಿಸಿದ್ದರು. ಆದರೆ ಪೊಲೀಸರು ಎಲ್ಲರನ್ನು ತೆರಳುವಂತೆ ಸೂಚಿಸಿದರು. ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next