Advertisement

ಟಿಕಾಯತ್ ಮೇಲೆ ಹಲ್ಲೆ: ವ್ಯಾಪಕ ಖಂಡನೆ ; ಕಠಿಣ ಕ್ರಮ ಎಂದ ಆರಗ ಜ್ಞಾನೇಂದ್ರ

06:20 PM May 30, 2022 | Team Udayavani |

ಬೆಂಗಳೂರು : ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ, ಮಸಿ ಬಳಿದ ಘಟನೆಗೆ ಕಾಂಗ್ರೆಸ್ ನಾಯಕರು ಸೇರಿ, ರೈತಪರ ಮುಖಂಡರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.ಈಗಾಗಲೇ ದಾಳಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಖಂಡಿಸಿದ್ದು, ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ದೈಹಿಕ ಹಲ್ಲೆ, ಭಿನ್ನಾಭಿಪ್ರಾಯವನ್ನು ಸಿದ್ದಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರ ಬೌದ್ದಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.ಸಹನೆ-ಸಜ್ಜನಿಕೆಗೆ ಹೆಸರಾದ ನಾಡನ್ನು ಗೂಂಡಾ ರಾಜ್ಯವನ್ನಾಗಿ ಮಾಡಿದ ಕುಖ್ಯಾತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ.

ರೈತ ನಾಯಕ‌ ರಾಕೇಶ್ ಟಿಕಾಯತ್ ಅವರ ಮೇಲೆ ನಡೆದಿರುವ ಹಲ್ಲೆ ಅತ್ಯಂತ ಖಂಡನೀಯ ದುಷ್ಕೃತ್ಯ. ಮುಖ್ಯಮಂತ್ರಿಗಳೇ ನೆನಪಿರಲಿ, ಈ ಗೂಂಡಾಗಳು ಮಸಿ ಬಳಿದಿರುವುದು ರಾಜ್ಯ ಸರ್ಕಾರದ ಮುಖಕ್ಕೆ.ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟದಿದ್ದರೆ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂರುವ ನೈತಿಕತೆ ನಿಮಗಿಲ್ಲ.ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಮೈಕ್ ನಿಂದ ಹಲ್ಲೆ ನಡೆಸಿ, ಮಸಿ ಬಳಿದ ಘಟನೆ ಗಾಂಧಿಭವನದಲ್ಲಿ ಸೋಮವಾರ ನಡೆದಿದೆ.

Advertisement

ಡಿ.ಕೆ. ಶಿವಕುಮಾರ್ ಖಂಡನೆ

‘ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ನಾನು ಖಂಡಿಸುತ್ತೇನೆ.ಷಿ ಕರಾಳ ಕಾಯ್ದೆಯನ್ನು ಖಂಡಿಸಿ ಒಂದು ವರ್ಷದ ಕಾಲ ನಿರಂತರ ಹೋರಾಟ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಪ್ರತಿಭಟನೆ ಮಾಡಿದ ರೈತ ನಾಯಕರು ರಾಜ್ಯದ ಹಿತಕ್ಕಾಗಿ ಇಲ್ಲಿ ಸಭೆ ಮಾಡುತ್ತಿದ್ದರು. ಆದರೆ ಅವರ ಮೇಲೆ ಪೂರ್ವ ನಿಯೋಜನೆಯೊಂದಿಗೆ ಈ ದಾಳಿ ಮಾಡಲಾಗಿದೆ. ಇದು ಕರ್ನಾಟಕ ರಾಜ್ಯಕ್ಕೆ ಆಗಿರುವ ಅಪಮಾನ. ಮುಖ್ಯಮಂತ್ರಿಗಳು ರಾಜ್ಯ ಹಾಗೂ ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತರುವುದಾಗಿ ಹೇಳಿದ್ದಾರೆ. ಆದರೆ ಇಂತಹ ಕೃತ್ಯಗಳು ರಾಜ್ಯಕ್ಕೆ ಶೋಭೆ ತರುವುದಿಲ್ಲ ಎಂದರು.

ಖಂಡಿತ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದಿಂದ ಗಮನ ಬೇರೆಡೆ ಸೆಳೆಯಲು ಈ ಕೃತ್ಯ ಎಸಗಲಾಗಿದೆ, ದಿನ ನಿತ್ಯ ಅವರ ಮೇಲೆ ಕೇಳಿಬರುತ್ತಿರುವ ಆರೋಪ, ಹಗರಣಗಳು, ನೇಮಕಾತಿ ಅಕ್ರಮ, ಅನ್ಯಾಯ, 40% ಕಮಿಷನ್, ಪಠ್ಯ ಪುಸ್ತಕ ವಿವಾದಗಳನ್ನು ಮುಚ್ಚಿಕೊಳ್ಳಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಜನರ ಬದುಕಿಗೆ ಬೆಂಕಿ ಹಚ್ಚುತ್ತಿದ್ದು, ಇದನ್ನೆಲ್ಲಾ ಮರೆಮಾಚಿ ಗಮನ ಬೇರೆಡೆ ಸೆಳೆಯಲು ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದರು.

ಪ್ರತಿಭಟನೆಗೆ ನಿಲ್ಲಬೇಕಾಗುತ್ತದೆ

ಈ ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಾಣದ ಕೈಗಳ ರಾಜಕೀಯ ಪಿತೂರಿಯಿಂದ ಆಗಿರುವ ಈ ಘಟನೆಯ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ರಾಜ್ಯಾದ್ಯಂತ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿಲ್ಲಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.

ಯಾವ ಪಕ್ಷದವರಾದರೂ ಬಂಧನ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಟಿಕಾಯತ್ ಮೇಲೆ ಪತ್ರಕರ್ತರ ಸೊಗಿನಲ್ಲಿ ಮಸಿ ಹಾಕಿದ್ದಾರೆ. ಅವರು ಯಾವ ಪಕ್ಷದವರೆ ಆದರೂ ಬಂಧನ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಮೂವರ ಬಂಧನ ಆಗಿದೆ. ಇಂತಹ ಘಟನೆ ರಾಜ್ಯದಲ್ಲಿ ಆಗಬಾರದಿತ್ತು. ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವ ಪಕ್ಷದವರು ಕೂಡ ಇಂತಹ ಕೃತ್ಯ ಮಾಡಲು ಹೇಳುವುದಿಲ್ಲ ಎಂದರು.

ಪಠ್ಯ ವಿಚಾರ ಮರೆಮಾಚಲು ಈ ಪ್ರಕರಣ ಅಂತ ಡಿ.ಕೆ. ಶಿವಕುಮಾರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನೊಂದು ವರ್ಷದಲ್ಲಿ ಚುನಾವಣೆ ಬರುತ್ತಿದೆ.ಹಾಗಾಗಿ ಕಾಂಗ್ರೆಸ್ ಆರೋಪ ‌ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಜನರು ಪಕ್ಷ ಬಿಟ್ಟು ಹೊಗುತ್ತಿದ್ದಾರೆ. ಅವರ ಮಾತಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next