ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ, ಭುವನ್ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಆರೋಪಿಗಳಾದ ಪರ್ವೇಜ್ ಅಲಿ ಫಹೀಮ್, ದನೀಶ್ ಅಲಿ ಪರ್ವೇಜ್, ಅಬ್ದುಲ್ ಗಫೂರ್ ಖಾನ್, ಶಾಬಾಜ್ ಖಾನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾ. ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಅದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಸಾಕ್ಷಿಗಳಿಗೂ ತೊಂದರೆ ಆಗಲಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು, ಜಾಮೀನು ನೀಡಿದರೆ ಆರೋಪಿಗಳ ಮುಂದೆ ಹಾಜರಾಗಿ ತನಿಖೆಗೆ ಎಲ್ಲ ಸಹಕಾರ ನೀಡಲಿದ್ದಾರೆ ಎಂದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲೆ ಕೆ.ಪಿ.ಯಶೋಧಾ, ಅರೋಪಿಗಳು ನಟಿ ಹರ್ಷಿಕಾ ಪೂಣಚ್ಚ, ಭುವನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಜಾಮೀನು ನೀಡಬಾರದೆಂದು ಕೋರಿದರು. ನಟಿ ಹರ್ಷಿಕಾ ಪೂಣಚ್ಚ, ಭುವನ್ ಏ.2ರಂದು ರಾತ್ರಿ ವೇಳೆ ಕಾರಿನಲ್ಲಿ ಪುಲಿಕೇಶಿ ನಗರದ ರೆಸ್ಟೋರೆಂಟ್ ಗೆ ಹೋದಾಗ ನಾಲ್ಕು ಯುವಕರು ಅಡ್ಡಗಟ್ಟಿ ಬೆದರಿಕೆ ಹಾಕಿದರು ಮತ್ತು ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದರು.
ಬಳಿಕ ಏ.15ರಂದು ಪೂಣಚ್ಚ ನಗರದ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿ ದ್ದರು. ಆ ಪ್ರಕರಣದಲ್ಲಿ ಪರ್ವೇಜ್ ಅಲಿ ಫಹೀಮ್, ದನೀಶ್ ಅಲಿ ಪರ್ವೇಜ್, ಅಬ್ದುಲ್ ಗಫೂರ್‌ಖಾನ್, ಶಾಬಾಜ್ ಖಾನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ತಲೆ ಮರೆಸಿಕೊಂಡಿದ್ದಾರೆ. ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿವಿಲ್ ನ್ಯಾಯಾಲಯ ಮೇ 9ರಂದು ತಿರಸ್ಕರಿಸಿತ್ತು. ಹಾಗಾಗಿ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.