ಗಂಗಾವತಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದರಿಂದ ಮೃತ ವ್ಯಕ್ತಿ ಕಡೆಯವರು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರನ್ನು ಥಳಿಸಿದ ಘಟನೆ ಖಂಡಿಸಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಭಾರತೀಯ ವೈದ್ಯಕೀಯ ಸಂಘ, ರಾಜ್ಯ ಔಷಧ ವಿತರಕರು, ವ್ಯಾಪಾರಿಗಳ ಸಂಘ ಮತ್ತು ರಕ್ತ ಪರೀಕ್ಷಕರ ಸಂಘದ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಐಎಂಎ ನಿಯೋಜಿತ ರಾಜ್ಯಾಧ್ಯಕ್ಷ ಡಾ| ಮಧುಸೂದನ್ ಕಾರಿಗನೂರು ಮಾತನಾಡಿ, ಆಸ್ಪತ್ರೆ ವೈದ್ಯ ಹಾಗೂ ರಕ್ತ ಪರೀಕ್ಷೆ ಮಾಡುವ ಸಿಬ್ಬಂದಿ ಮೇಲೆ ಮೃತ ವ್ಯಕ್ತಿ ಕಡೆಯವರು ಹಲ್ಲೆ ಮಾಡಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ವೈದ್ಯರ ಮೇಲೆ ನಿರಂತರ ಹಲ್ಲೆಯಾಗುತ್ತಿವೆ. ವೈದ್ಯರು ಅಭದ್ರತೆಯ ಮಧ್ಯೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದು, ಸರಕಾರ ಸೂಕ್ತ ಭದ್ರತೆ ನೀಡಬೇಕು. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗಳನ್ನು ಬಂಧಿಸುವವರೆಗೆ ಖಾಸಗಿ ಆಸ್ಪತ್ರೆಗಳು ಮತ್ತು ಔಷಧ ಅಂಗಡಿಗಳ ಕಾರ್ಯ ಸ್ಥಗಿತವಾಗಿರುತ್ತದೆ. ಕೂಡಲೇ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಂತರ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಐಎಂಎ ಅಧ್ಯಕ್ಷ ಶ್ರೀನಿವಾಸ ರಡ್ಡಿ, ಔಷಧ ವ್ಯಾಪಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರು, ಡಾ| ಮಲ್ಲನಗೌಡ, ವೈದ್ಯರಾದ ಮಾಧವ ಶೆಟ್ಟಿ, ಸೋಮರಾಜು, ಮಧುಸೂದನ್, ಹನುಮಂತಪ್ಪ, ಎಸ್.ವಿ. ಹಂದ್ರಾಳ, ವಿ.ವಿ. ಚಿನಿವಾಲರ್, ಸಂಗಮ ಪಾಟೀಲ್, ಅಮರೇಶ ಕನ್ನಾಳ ಸೇರಿದಂತೆ ಇತರರಿದ್ದರು.